ಫೆ. 27ರಿಂದ ದಾವಣಗೆರೆ ತಾಲ್ಲೂಕಿನಾದ್ಯಂತ ಪೋಲಿಯೋ ಲಸಿಕೆ ಕಾರ್ಯಕ್ರಮ

ದಾವಣಗೆರೆ : ತಾಲ್ಲೂಕಿನಾದ್ಯಂತ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕು ದಿನಗಳ ಕಾಲ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಫೆ. 27 ರ ದಿನವನ್ನು ಪೋಲಿಯೋ ಭಾನುವಾರವನ್ನಾಗಿ ಆಚರಿಸಿ, ಅಂದು ತಾಲ್ಲೂಕಿನ 423 ಲಸಿಕಾ ಕೇಂದ್ರಗಳಲ್ಲಿಯೂ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು.
ಫೆ. 27 ರಿಂದ ಮಾರ್ಚ್ 02 ರವರೆಗೆ ತಾಲ್ಲೂಕಿನ ಐದು ವರ್ಷದೊಳಗಿನ 70375 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಫೆ. 27 ರ ದಿನವನ್ನು ಪೋಲಿಯೋ ದಿನವನ್ನಾಗಿ ಆಚರಿಸಿ, ಅಂದು ತಾಲ್ಲೂಕಿನ 423 ಲಸಿಕಾ ಕೇಂದ್ರಗಳಲ್ಲಿಯೂ ಮಕ್ಕಳಿಗೆ ಲಸಿಕೆ ಹಾಕಿ, ಮೊದಲ ದಿನದಂದೇ ಶೇ. 90 ರಷ್ಟು ಗುರಿ ಸಾಧಿಸುವ ಉದ್ದೇಶವಿದೆ. ಉಳಿದ ಮಕ್ಕಳಿಗೆ ಮನೆ ಮನೆ ಭೇಟಿ ನೀಡಿ ನಮ್ಮ ತಂಡವು ಲಸಿಕೆ ನೀಡಲಿದೆ. ಮಕ್ಕಳಿಗೆ ಮನೆ ಮನೆ ಭೇಟಿ, ಲಸಿಕಾ ಕೇಂದ್ರಗಳು ಹಾಗೂ ಸಂಚಾರಿ ತಂಡ ಸೇರಿದಂತೆ ಒಟ್ಟು 444 ತಂಡಗಳನ್ನು ರಚಿಸಲಾಗಿದ್ದು, ಒಟ್ಟು 860 ಲಸಿಕಾಕರ್ತರು, 85 ಆರೋಗ್ಯ ಮೇಲ್ವಿಚಾರಕರು ಕ್ಷೇತ್ರದಲ್ಲಿ ಕಾರ್ಯನಿರ್ವಸಲಿದ್ದಾರೆ.
ತಾಲ್ಲೂಕು ವ್ಯಾಪ್ತಿಯಲ್ಲಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.
ಅಲೆಮಾರಿ ಕುಟುಂಬಗಳು, ಇಟ್ಟಿಗೆ ಭಟ್ಟಿ, ಸ್ಲಂಗಳು ಮುಂತಾದ ಪ್ರದೇಶಗಳಲ್ಲಿನ 5 ವರ್ಷದೊಳಗಿನ ಮಕ್ಕಳಿಗೂ ಸಹ ತಪ್ಪದೆ ಲಸಿಕೆ ಹಾಕಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
***************

 
                         
                       
                       
                       
                       
                       
                       
                      