ಜಿಎಂಎಸ್ ಅಕಾಡೆಮಿಯಲ್ಲಿ ಸಾಧಕಿಯರಿಗೆ ಸನ್ಮಾನ : ಗಾಯತ್ರಿ ಸಿದ್ದೇಶ್ವರ್
ದಾವಣಗೆರೆ : ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು. ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದು ಸಮಾಜಕ್ಕೆ ಗೌರವ ತರಬೇಕು ಎಂದು ಗಾಯತ್ರಿ ಸಿದ್ದೇಶ್ವರ್ ಹೇಳಿದರು.ನಗರದ ಜಿಎಂಎಸ್ ಅಕಾಡೆಮಿಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟಿಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಹಿರಿಯ ವರದಿಗಾರರಾದ ದೇವಿಕಾ ಸುನಿಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಆಕೆಯ ತಂದೆ, ಸಹೋದರ, ಗುರು ಅಥವಾ ಪತಿ ಇರುತ್ತಾರೆ. ಮಹಿಳಾ ದಿನಾಚರಣೆ ಎಂದಾಕ್ಷಣ ಸಾರಾಸಗಟಾಗಿ ಎಲ್ಲ ಪುರುಷರು ಹೀಗೇ ಎಂದು ವ್ಯಾಖ್ಯಾನಿಸುವುದು ಬೇಡ. ಸಮಾಜ ಎಂದ ಮೇಲೆ ಕೆಟ್ಟವರೂ ಇರುತ್ತಾರೆ. ಬೆನ್ನು ತಟ್ಟುವವರು ಇರುತ್ತಾರೆ. ಒಳ್ಳೆಯವರ ಜೊತೆ ಸಾಗೋಣ, ಕೆಡುಕು ಬಯಸುವವರನ್ನು ನಿರ್ಲಕ್ಷಿಸಿ, ಎದೆಗುಂದದೆ ಮುಂದೆ ಸಾಗೋಣ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಹೆಚ್.ಎಸ್ ಅನಿತಾ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಇಂದಿಗೂ ಶೋಷಣೆಗೆ ಒಳಗಾಗುತ್ತಿರುವುದು ದುರಂತ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಖಂಡಿಸಬೇಕು. ಮನೆಯ ಒಳಗೂ ಹೊರಗು ಅವಿರತವಾಗಿ ದುಡಿಯುವ ಮಹಿಳೆಗೆ ನಿರುದ್ಯೋಗ ಎಂಬುದು ಇಲ್ಲ. ಸದಾ ಚಟುವಟಿಕೆಯಿಂದ ಇರುವ ಮಹಿಳೆ ಅಬಲೆಯಲ್ಲ, ಸಬಲೆಯೊಂದಿಗೆ ಪ್ರಬಲೆಯಾಗಿದ್ದಾಳೆ ಎಂದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ತಮ್ಮ ಹಾಸ್ಯದ ತುಣುಕುಗಳೊಂದಿಗೆ ನೆರೆದಿದ್ದವರನ್ನು ನಕ್ಕುನಲಿಸಿದರು. ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಪ್ರಾಚಾರ್ಯರಾದ ಶ್ವೇತಾ ಎಸ್., ಮರೀಗೌಡರ್, ಸುಜಾತ ವಿಶ್ವನಾಥ, ಸವಿತಾ ಪಿ.ಹೆಚ್ ಸೇರಿದಂತೆ ಹಲವರಿದ್ದರು. ಕಾಲೇಜಿನಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಾದ ರಾಧಾ, ಅಮೂಲ್ಯ ಅವರಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಅಂತರಾಷ್ಟಿಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ಮತ್ತು ಪಾರಿತೋಷಕಗಳನ್ನು ನೀಡಲಾಯಿತು.