ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮ ತಹಸಿಲ್ದಾರರ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಕ್ರಮ- ಮಹಾಂತೇಶ್ ಬೀಳಗಿ

WhatsApp Image 2022-03-20 at 2.28.29 PM

ದಾವಣಗೆರೆ: ತಹಸಿಲ್ದಾರರ ಕಚೇರಿಗಳಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು, ಹಾಗೂ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಯೋಜನೆಗಳ ಸವಲತ್ತು ದೊರಕಿಸುವ ಸಲುವಾಗಿ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ತಹಸಿಲ್ದಾರರ ಕಚೇರಿಗಳಲ್ಲಿ ವೃದ್ಧಾಪ್ಯವೇತನ, ವಿಧವಾವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ದೊರಕಿಸಲು ಮಧ್ಯವರ್ತಿಗಳ ಹಾವಳಿ ತುಂಬಾ ಇದೆ. ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮ ಇಂತಹ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಇಲ್ಲವಾಗಿಸಿ, ಅರ್ಹ ಫಲಾನುಭವಿಗಳ ಮನೆಗೆ ನೇರವಾಗಿ ಸೌಲಭ್ಯ ಮಂಜೂರಾತಿ ತಲುಪಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಸರ್ಕಾರದ ಈ ವಿಶಿಷ್ಟ ಕಾರ್ಯಕ್ರಮದ ಉದ್ದೇಶವೂ ಇದೇ ಆಗಿದೆ. ದಾವಣಗೆರೆ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ ಅಷ್ಟೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ ಹಾಗೂ ರಾತ್ರಿಯ ವೇಳೆ ಗ್ರಾಮ ಪ್ರವೇಶ ಸಂದರ್ಭದಲ್ಲಿ ಬಯಲು ಶೌಚಕ್ಕೆ ಕೂರುವ ದೃಶ್ಯಗಳೇ ಅಧಿಕಾರಿಗಳನ್ನು ಸ್ವಾಗತಿಸುತ್ತವೆ. ಶೌಚಾಲಯ ಕಟ್ಟಿಸಲು ಇನ್ನೂ ಕೆಲವರು ಇಲ್ಲಸಲ್ಲದ ನೆಪಗಳನ್ನು ಹೇಳಿದರೆ, ಕಟ್ಟಿಸಿಕೊಂಡಿರುವ ಶೌಚಾಲಯಗಳನ್ನು ಕೆಲವರು ಬಳಕೆ ಮಾಡದೆ, ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿಡುವ ಕೋಠಡಿಯನ್ನಾಗಿಸಿದ್ದಾರೆ. ಹೀಗಾಗಿ ಕೋಡಿಹಳ್ಳಿ ಮತ್ತು ಕಕ್ಕರಗೊಳ್ಳ ಗ್ರಾಮಗಳನ್ನು ದತ್ತು ಪಡೆದು, ಈ ಎರಡೂ ಗ್ರಾಮಗಳನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಸೂಚನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವೃದ್ಧಾಪ್ಯವೇತನ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳಡಿ ಒಟ್ಟು 134 ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದ್ದು, ಎರಡೂ ಗ್ರಾಮಗಳಲ್ಲಿ ಮತ್ತೊಮ್ಮೆ ಸರ್ವೆ ಮಾಡಿಸಿ, ಸಾಮಾಜಿಕ ಭದ್ರತೆ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೂ ಸವಲತ್ತು ಮಂಜೂರು ಮಾಡಲಾಗುವುದು. ಕೋಡಿಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಕೋರಿದ್ದು, ಸೋಮವಾರದಿಂದಲೇ ಈ ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಗ್ರಾಮಸ್ಥರು ಆದಷ್ಟು ಬಸ್ ಸೌಲಭ್ಯವನ್ನೇ ಬಳಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ನಡುವೆ ಗ್ರಾಮಸ್ಥರೊಬ್ಬರು ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಈಗಾಗಲೆ 11350 ಕ್ವಿಂ. ರಾಗಿಯನ್ನು ಖರೀದಿ ಮಾಡಿದ್ದೇವೆ. ನೊಂದಣಿ ಮಾಡಿಸಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ರಾಗಿಯನ್ನು ಪ್ರತಿ ರೈತರಿಂದ ಗರಿಷ್ಟ 25 ಕ್ವಿಂ. ಅಷ್ಟೇ ಖರೀದಿಸಲು ಸರ್ಕಾರದ ಆದೇಶದಂತೆ ಅವಕಾಶವಿದೆ. ಬಹಳಷ್ಟು ರೈತರ ಮನವಿಯಂತೆ ದೊಡ್ಡ ಹಿಡುವಳಿದಾರ ರೈತರಿಂದಲೂ ಅಲ್ಲದೆ ಗರಿಷ್ಟ 50 ಕ್ವಿಂ. ವರೆಗೂ ರಾಗಿ ಖರೀದಿಗೆ ಅನುಮತಿ ನೀಡುವಂತೆ ಈಗಾಗಲೆ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ತಂಡವು ಹಳ್ಳಿಗಳಿಗೆ ಭೇಟಿ ನೀಡಿ ದೀನದಲಿತರ, ಬಡವರ ಸಮಸ್ಯೆಗಳನ್ನು ಆಲಿಸಿ ಮನೆಬಾಗಿಲಲ್ಲಿಯೇ ಪರಿಹಾರ ದೊರಕಿಸಿಕೊಡುವ ಒಂದು ವಿನೂತನ ಕಾರ್ಯಕ್ರಮ ಗ್ರಾಮ ವಾಸ್ತವ್ಯವಾಗಿದೆ. ಕೋಡಿಹಳ್ಳಿ, ಕಕ್ಕರಗೊಳ್ಳ ಗ್ರಾಮಗಳು ಭದ್ರಾ ಅಚ್ಚುಕಟ್ಟು ಭಾಗದ ಕೊನೆಯ ಪ್ರದೇಶವಾಗಿದೆ. ದೇವರಬೆಳಕೆರೆ ಪಿಕಪ್ ಡ್ಯಾಮ್ ಮೂಲಕ ಚಾನೆಲ್ ನೀರು ಹರಿದು ಬರುತ್ತಿರುವ ಕಾರಣದಿಂದಾಗಿ ಗ್ರಾಮವು ನೀರಾವರಿ ಪ್ರದೇಶವಾಗಿದೆ. ಹಿಂದಿನ ದಿನಗಳಲ್ಲಿ ತೊಗರಿ, ನವಣೆ, ಕೊತ್ತಂಬರಿಯಂತಹ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರು, ಪ್ರಸ್ತುತ ದಿನಗಳಲ್ಲಿ ಭದ್ರಾ ಚಾನೆಲ್ ನೀರಿನ ಸೌಲಭ್ಯವಿದ್ದು, ರೈತರು ಉತ್ತಮ ಬೆಳೆಗಳನ್ನು ಬೆಳೆಯಬೇಕು. ದಾವಣಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೋಷಣೆಗೆ ಒಳಗಾದ ಗ್ರಾಮ ಮತ್ತು ಮೂಲಭೂತ ಸೌಲಭ್ಯ ವಂಚಿತ ಗ್ರಾಮ ಕೋಡಿಹಳ್ಳಿ ಆಗಿದೆ, ಆದ್ದರಿಂದ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ಮೂಲಕ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ಮಾತನಾಡಿ, ಗ್ರಾಮ ಸ್ವರಾಜ್ಯದ ಕಲ್ಪನೆಯಲ್ಲಿ ಗ್ರಾಮವನ್ನು ಅಭಿವೃದ್ಧಿಗೊಳಿಸಲು, ಗ್ರಾಮದ ಜನರೇ ಮುಂದಾಳತ್ವ ವಹಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತೆ ಮಾಡುವುದಾಗಿದೆ. ಜಲಜೀವನ್ ಮಿಷನ್ ಮೂಲಕ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜನಗಳ ಸಹಕಾರವಿದ್ದರೆ ಉತ್ತಮ ಆಡಳಿತ ಒದಗಿಸಲು ಸಾಧ್ಯ ಎಂದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಾನೂನಿನ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನಗಳನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ. ಕೋಡಿಹಳ್ಳಿ ಗ್ರಾಮದ ಅಂಗನವಾಡಿ ಬಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಸ್ಥಳದ ಸರ್ವೇ ಕಾರ್ಯ ನಡೆಯುತ್ತಿದೆ, ಗ್ರಾಮಕ್ಕೆ ಸ್ಮಶಾನ ಸೌಲಭ್ಯ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಗ್ರಾಮದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳುವಾದನದ ಸಹಿತ ಭವ್ಯ ಸ್ವಾಗತ ಕೋರಿದರು, ಅಲ್ಲದೆ ಎತ್ತಿನಗಾಡಿಯಲ್ಲಿ ಅಧಿಕಾರಿಗಳ ಮೆರವಣಿಗೆ ಸಾಗಿಬಂದಿತು. ಬಳಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಗ್ರಾಮದ ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿ ಜನರ ಬಳಿ ಸಮಸ್ಯೆಗಳ ಕುರಿತು ಚರ್ಚಿಸಿದರು.
ಕಾಲೋನಿಯ ಬಸಮ್ಮ ಎಂಬುವವರ ಮನೆಗೆ ಭೇಟಿ ನೀಡಿ, ಸರ್ಕಾರದ ಸೌಲಭ್ಯಗಳಾದ ಪಡಿತರ, ವೃದ್ಧಾಪ್ಯ ವೇತನ, ಕುಡಿಯುವ ನೀರು, ಶೌಚಾಲಯಗಳು ಕುರಿತು ಮಾಹಿತಿ ಪಡೆದಾಗ, ಗ್ರಾಮದ ಅನೇಕ ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ತಿಳಿದು. ಸ್ಥಳದಲ್ಲೇ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಹಾಗೂ ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶೀಘ್ರದಲ್ಲೆ ಗ್ರಾಮದ ಎಲ್ಲಾ ಮನೆಗಳಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು.

ಕಾಲೋನಿಯ ಮತ್ತೋರ್ವ ನಿವಾಸಿ ರತ್ನಮ್ಮನ ಅವರ ಮನೆಗೆ ಭೇಟಿ ನೀಡಿದಾಗ ಗಂಡ ಮರಣಹೊಂದಿ ಹತ್ತು ವರ್ಷಗಳು ಕಳೆದರೂ ಕೂಡ ವಿಧವಾ ವೇತನ ಪಡೆಯುತ್ತಿಲ್ಲದಿರುವುದರ ಕುರಿತು ಮಾಹಿತಿ ಪಡೆದು, ಗ್ರಾಮ ಲೆಕ್ಕಾಧಿಕಾರಿಗೆ ಎರಡು ದಿನಗಳ ಒಳಗೆ ವಿಧವಾ ವೇತನ ಮಂಜೂರು ಆದೇಶ ಪ್ರತಿಯನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.
ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ವ್ಯವಸ್ಥೆ, ಬಿಸಿಯೂಟ ತಯಾರಿಸುವ ಅಡುಗೆಕೋಣೆ, ಕಚೇರಿ, ತರಗತಿಗಳನ್ನು ಪರಿಶೀಲಿಸಿ, ಪಾಠ ಪ್ರವಚನಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.ಕಾರ್ಯಕ್ರಮದ ಅಂಗವಾಗಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳ ಮಂಜೂರಾತಿ ಪತ್ರ, ಹಕ್ಕುಪತ್ರಗಳನ್ನು ವಿತರಿಸಲಾಯಿತು. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ವೇದಿಕೆಯಲ್ಲಿಯೇ ಸೀಮಂತ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್ ಅವರು ತಮ್ಮ ಪತ್ನಿ ರತ್ನಮ್ಮ ಅವರ ಸಹಿತ ಪಾಲ್ಗೊಂಡಿದ್ದು ವಿಶೇಷವೆನಿಸಿತು. ಕಕ್ಕರಗೊಳ್ಳ ಗ್ರಾ.ಪಂ. ಅಧ್ಯಕ್ಷ ಗುತ್ತೆಪ್ಪ, ಉಪಾಧ್ಯಕ್ಷೆ ಆಶಾ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಆರೋಗ್ಯ ಇಲಾಖೆಯಿಂದ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ವೇದಿಕೆಯ ಬಳಿ ಇದೇ ಸಂದರ್ಭದಲ್ಲಿ ಜರುಗಿತು.

Leave a Reply

Your email address will not be published. Required fields are marked *

error: Content is protected !!