ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
ಮಾರ್ಚ್ ಏಪ್ರಿಲ್ ತಿಂಗಳ ಎಂದರೆ ಪರೀಕ್ಷೆಯ ಸಮಯ. ಪರೀಕ್ಷೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಭಯದಲ್ಲಿ ಓದಿದ್ದು ಮರೆತು ಹೋಗುವುದು, ನೆನಪಿಗೆ ಬಾರದಿರುವುದು , ಓದು ಅರ್ಥವಾಗದಿರುವುದು ಕಷ್ಟವಾಗುವುದು ಇದರೊಂದಿಗೆ ನಿದ್ರೆ ಸರಿ ಇಲ್ಲದೆ ರಾತ್ರಿ ಓದುವುದು, ಊಟ ತಿಂಡಿ ಸರಿಯಾಗಿ ಮಾಡದೆ ಆರೋಗ್ಯ ಹದಗೆಡುವುದು, ಪರೀಕ್ಷೆಯ ಹಾಲ್‌ನಲ್ಲಿ ಭಯದಲ್ಲಿ ಓದಿದ್ದೆಲ್ಲಾ ಮರೆತು ಹೋಗುವುದು ಇಂಥ ಹಲವು ಸಮಸ್ಯೆಗಳು ನಮ್ಮ ವಿದ್ಯಾರ್ಥಿಗಳಲ್ಲಿ ಕಾಡುತ್ತವೆ.
ಈ ತರಹದ ಸಮಸ್ಯೆ ಮಕ್ಕಳಲ್ಲಿ ಕಾಡುತ್ತಿರುತ್ತದೆ ಜತೆಗೆ ಪೋಷಕರ ಒತ್ತಡ ಮತ್ತಷ್ಟು ಭಯ ಮೂಡುವಂತೆ ಮಾಡುತ್ತದೆ. ತಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಸಿ ಹೇಳುವುದು, ಓದಲು ಹೆಚ್ಚು ಒತ್ತಡ ಹಾಕುವುದು ಹೀಗೆ ತಮ್ಮ ಆತಂಕ, ಭಯವನ್ನೆಲ್ಲಾ ಮೊದಲೇ ಹೆದರಿರುವ ಮಕ್ಕಳ ಮೇಲೆ ಹಾಕುತ್ತಾರೆ. ಇದನ್ನೆಲ್ಲಾ ಸಮರ್ಥವಾಗಿ ಎದುರಿಸಿ ಯಾವ ರೀತಿಯಲ್ಲಿ ಪರೀಕ್ಷೆ ತಯಾರಿ ಮಾಡಬೇಕು ಎನ್ನುವುದೆ ಆತಂಕ ಮೂಡಿರುತ್ತದೆ . ಅದಕ್ಕೆ ಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ.
ಪರೀಕ್ಷೆ ಎಂದರೇನು?
ಪರೀಕ್ಷೆ ಎಂಬುದು ನೀವು ಅಭ್ಯಸಿಸಿದ ಪಾಠಗಳ ಬಗ್ಗೆ ನೀವೆಷ್ಟು ಅರ್ಥ ಮಾಡಿಕೊಂಡಿದ್ದೀರಿ ಹಾಗೂ ಅದರಿಂದ ನೀವೆಷ್ಟು ಕಲಿತಿದ್ದೀರಿ ಎಂದು ಅರಿಯುವ ಒಂದು ಕ್ರಮ. ನಿಮ್ಮ ಕಲಿಕೆಯನ್ನು ಒಂದು ಅಂಕದ ರೂಪದಲ್ಲಿ ಒದಗಿಸಿ ಅದರ ಮೂಲಕ ಅಳೆಯುವ ಒಂದು ಸಾಧನ ಅಷ್ಟೆ. ನಿಮ್ಮ ಮುಂದಿನ ಓದಿಗೆ ಅನುಕೂಲವಾಗಲು ನಡೆಸುವ ಒಂದು ಕ್ರಮವೇ ಪರೀಕ್ಷೆ. ಉದಾಹರಣೆಗೆ ಒಬ್ಬ ಸಾಧುವಿಗೆ ದೀಕ್ಷೆ ನೀಡಬೇಕೆಂದರೆ ಆತ ಹಲವು ರೀತಿಯಲ್ಲಿ ಅಭ್ಯಾಸ ಮಾಡಿ, ತಿದ್ದಿ ತೀಡಿ ನಂತರ ಆತನಿಗೆ ಪರೀಕ್ಷೆ ಎಂಬ ಕ್ರಮವನ್ನು ನಡೆಸಲಾಗುತ್ತದೆ. ಅದರಲ್ಲಿ ಸಮರ್ಥನಾಗಿ ಹೊರಹೊಮ್ಮಿದರಷ್ಟೆ ಆತನಿಗೆ ಗುರುವಿನಿಂದ ದೀಕ್ಷೆ ದೊರಕುತ್ತದೆ. ಹಾಗೆಯೇ ಈ ಪರೀಕ್ಷೆಯೂ ಸಹ.
ಓದುವ ಕ್ರಮ ಹೀಗಿರಲಿ
ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಓದಿಕೊಂಡು ಬಂದದ್ದು ಬರೆಯುವುದು, ಸುಲಭ ಎನಿಸಿದ್ದು ಮೊದಲು ಬರೆದು, ನಂತರ ಉಳಿದ ಪ್ರಶ್ನೆಗಳಿಗೆ ಬೇಕಾಗಿದ್ದಷ್ಟು ಉತ್ತರಿಸಿ. ಅಂಕಗಳಿಗೆ ಅನುಗುಣವಾಗಿ ಸಮಯಕ್ಕೆ ತಕ್ಕಂತೆ ಪ್ರಶ್ನೆಗಳಿಗೆ ಉತ್ತರಿಸಿ. ನಿಯಮಗಳನ್ನು ಸರಿಯಾಗಿ ಪಾಲಿಸಿ. ಬಂದದ್ದಷ್ಟೇ, ನಿಮಗೆ ನೆನಪಿದ್ದನ್ನಷ್ಟೇ ಬರೆದು ಬನ್ನಿ.
ಓದುವ ಕ್ರಮ ಹೀಗಿರಲಿ
ವೇಳಾಪಟ್ಟಿಯಂತೆ ಓದುವಾಗ ಗಡಿಬಿಡಿಯಲ್ಲಿ ಓದುವುದು ಒಳ್ಳೆಯದಲ್ಲ. ಒಂದು ಕೋಣೆಯಲ್ಲಿ ಕುಳಿತು ಶಾಂತ ಮನಸ್ಸಿನಿಂದ ಯಾವುದೇ ವಿಷಯವನ್ನು ಅಭ್ಯಸಿಸುವಾಗ ಪಾಯಿಂಟ್ಸ್ ಮಾಡಿಕೊಂಡು, ಬಾಯಿಬಿಟ್ಟು ಓದುವುದು ಉತ್ತಮ. ಏಕೆಂದರೆ ಹೆಚ್ಚು ಬರೆದಷ್ಟು ಹೆಚ್ಚು ನೆನಪಿನಲ್ಲಿರುತ್ತದೆ ಹಾಗೆಯೇ ಬಾಯಿಬಿಟ್ಟು ಓದುವುದರಿಂದ ನೀವು ಓದುವುದರ ಬಗ್ಗೆ ಗಮನ ಇರುತ್ತದೆ. ಹಾಗೆಯೇ ವಿಷಯ ಬೇಗ ಅರ್ಥವಾಗುತ್ತದೆ. ಹೀಗೆ ಓದಿದ್ದನ್ನು ನಿಮ್ಮದೇ ವಾಕ್ಯದಲ್ಲಿ ಬರೆದು ಪಾಯಿಂಟ್ಸ್ ಮಾಡಿಕೊಳ್ಳಿ ಇದು ಪರೀಕ್ಷೆಯ ಹಿಂದಿನ ದಿನ ಅನುಕೂಲವಾಗುತ್ತದೆ. ಕೆಲವರಿಗೆ ಸ್ನೇಹಿತರೊಂದಿಗೆ ಗುಂಪು ಚರ್ಚೆ ಮಾಡಿಕೊಂಡು ಓದುವ ಅಭ್ಯಾಸ ಇರುತ್ತದೆ. ಅದೂ ಒಳ್ಳೆಯದೆ. ಆದರೆ ಗುಂಪು ಚರ್ಚೆಯಲ್ಲಿ ನಿಮಗರ್ಥವಾದದ್ದನ್ನೇ ನಿಮ್ಮದೇ ವಾಕ್ಯದಲ್ಲಿ ಪಾಯಿಂಟ್ಸ್ ಮಾಡಿಕೊಂಡು ಬರೆಯುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಬಾಯಿಪಾಠ(ಕಂಠಪಾಠ) ಮಾಡಬೇಡಿ. ಏಕೆಂದರೆ ಅರ್ಥ ಮಾಡಿಕೊಂಡು ಓದಿದಷ್ಟು ನಿಮ್ಮ ಜ್ಞಾಪಕದಲ್ಲಿ ಯಾವಾಗಲೂ ಉಳಿಯುತ್ತದೆ.
ವೇಳಾಪಟ್ಟಿ ಮಾಡಿಕೊಳ್ಳಿ
ಮೊದಲು ಪರೀಕ್ಷೆಯ ವೇಳಾಪಟ್ಟಿ ದೊರೆತ ಕೂಡಲೇ ವಿದ್ಯಾರ್ಥಿಗಳು ಭಯ ಪಡುವ ಅಗತ್ಯವಿಲ್ಲ. ಬದಲಾಗಿ ಇಷ್ಟು ಮಾಡಿ, ಇಂದಿನಿಂದಲೇ ಪರೀಕ್ಷೆಗೆ ಇನ್ನೂ ಎಷ್ಟು ಸಮಯವಿದೆ ಎಂದು ವೇಳಾ ಪಟ್ಟಿ ಮಾಡಿಕೊಳ್ಳಿ. ನಂತರ ಇರುವ ಸಮಯವನ್ನು ನಿಮ್ಮ ಸಬ್ಜೆಕ್ಟ್‌ಗಳಿಗೆ ವಿಭಾಗ(ಡಿವೈಡ್) ಮಾಡಿಕೊಳ್ಳಿ. ಯಾವ ವಿಷಯಕ್ಕೆ ಎಷ್ಟು ಸಮಯ ಬೇಕು. ಯಾವ ವಿಷಯಕ್ಕೆ ಎಷ್ಟು ಒತ್ತುಕೊಡಬೇಕು. ನಿಮಗೆ ಕಷ್ಟ ಎನಿಸಿದ ವಿಷಯಕ್ಕೆ ಹೆಚ್ಚು ಒತ್ತು ನೀಡುವುದು ಎಂದು ಪಟ್ಟಿ ಮಾಡಿಕೊಳ್ಳಿ. ಒಂದು ಗಮನದಲ್ಲಿರಲಿ ಹೀಗೆ ಪಟ್ಟಿ ಮಾಡಿ ಇಷ್ಟೇ ಸಮಯ ಓದಲೇ ಬೇಕು ಎಂದು ಕಠಿಣ ನಿಯಮ ಬೇಡ. ನೀವು ಎಷ್ಟು ಶಾಂತವಾಗಿ ಇದ್ದು ಓದುತ್ತೀರೋ ಅಷ್ಟೇ ಚೆನ್ನಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯ. ಹಾಗೂ ಓದಿದ್ದೂ ನೆನಪಲ್ಲಿರುತ್ತದೆ.
ಹೋಲಿಕೆ ಬೇಡ
ಮಕ್ಕಳು ಹಾಗೂ ಪೋಷಕರು ಮಾಡುವ ಬಹುದೊಡ್ಡ ತಪ್ಪು ಎಂದರೆ ಹೋಲಿಕೆ . ಇನ್ನೊಬ್ಬರ ಜೊತೆ ಹೋಲಿಕೆ ಮಾಡಿಕೊಳ್ಳುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ಆತ್ಮಬಲ ಕುಸಿದು ಭಯದಲ್ಲಿ ಓದಿದ್ದನ್ನೂ ಮರೆಯುವ, ಇಲ್ಲವೆ ನೆನಪಿನಲ್ಲಿ ಇಟ್ಟುಕೊಳ್ಳಲಾಗದ ಸ್ಥಿತಿ ಎದುರಾಗುತ್ತದೆ. ನಿಮ್ಮೊಂದಿಗಿನ ಅತ್ಯುತ್ತಮ ಜ್ಞಾನದ ಪರೀಕ್ಷೆಯೇ ಹೊರತು ಇನ್ನೊಬ್ಬರ ಜ್ಞಾನದೊಂದಿಗಿನ ಪರೀಕ್ಷೆಯಲ್ಲ. ನಿಮ್ಮ ಸಾಮರ್ಥ್ಯ, ನಿಮ್ಮ ಆತ್ಮಬಲ, ನಿಮ್ಮಲ್ಲಿನ ವಿಶ್ವಾಸ ನಂಬಿ ಮುನ್ನಡೆಯಿರಿ.
ನಿದ್ರೆ ಆರೋಗ್ಯ ಅತ್ಯಗತ್ಯ
ಪರೀಕ್ಷೆ ಅಂತ ಹೇಳಿ ಊಟ, ತಿಂಡಿ, ನಿದ್ರೆ ಬಿಟ್ಟು ಓದುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಮಕ್ಕಳು ತಿನ್ನುವುದು ಹಾಗೂ ಚೆನ್ನಾಗಿ ನಿದ್ರೆ ಮಾಡುವುದು ಮಹತ್ವದ್ದಾಗಿದೆ. ದೈಹಿಕವಾಗಿ ಆರೋಗ್ಯ ಚೆನ್ನಾಗಿದ್ದಾರೆ ಓದಿದ್ದು ನೆನಪಿನಲ್ಲಿ ಇರಲು ಸಾಧ್ಯ. ನಿದ್ರೆ ಚೆನ್ನಾಗಿ ಮಾಡಿದಷ್ಟು ಓದಲು ಆಸಕ್ತಿ ಮೂಡುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಸೇವನೆ ಹೆಚ್ಚು ಒಳ್ಳೆಯದು ಹೆಚ್ಚು ಹಣ್ಣು ಸೇವಿಸುವುದು ಉತ್ತಮ. ಫ್ರಿಡ್ಜ್‌ನಲ್ಲಿನ ಪದಾರ್ಥ ಮುಟ್ಟಲೇ ಬೇಡಿ.
ಪುನರಾವರ್ತನೆ
ಪ್ರತಿ ದಿನಕ್ಕೆಂದು ವೇಳಾಪಟ್ಟಿ ಮಾಡಿದಂತೆ, ಅಂದು ಓದಿದ್ದನ್ನು ಮಲಗುವ ಮುನ್ನ ಒಂದು ರಫ್ ಸ್ಕೆಚ್‌ನಂತೆ ಪುನರಾವರ್ತನೆ (ರಿವೈಸ್) ಮಾಡಿಕೊಳ್ಳಿ. ಪ್ರತಿ ದಿನ ಹೀಗೆ ಎಲ್ಲಾ ವಿಷಯದಲ್ಲೂ ಮಾಡಿಕೊಂಡಲ್ಲಿ ನೆನಪಿನಲ್ಲಿ ಉಳಿಯಲು ಸಹಕರಿಸುತ್ತದೆ. ಪರೀಕ್ಷೆ ಹಿಂದಿನ ದಿನ ಮತ್ತೆ ನೀವು ಓದುವ ಅಗತ್ಯ ಇರುವುದಿಲ್ಲ. ಬದಲಾಗಿ ಹೀಗೆ ರಫ್ ಸ್ಕೆಚ್ ಮಾಡಿದ್ದು ನೋಡಿಕೊಂಡರೆ ಸಾಕು.
ಪೋಷಕರ ಪಾತ್ರ
ಮಕ್ಕಳು ಪರೀಕ್ಷೆಯನ್ನು ಸೂಕ್ತವಾಗಿ ಎದುರಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಭಯ, ಆತಂಕ ಪಡುವುದನ್ನು ತಪ್ಪಿಸಲು ಸಾಂತ್ವನದ, ಉತ್ತೇಜನದ ಮಾತುಗಳು ಅತ್ಯಗತ್ಯ. ಮಕ್ಕಳಿಗೆ ಕಷ್ಟ ಎನಿಸಿದ್ದನ್ನು ಹೇಳಿಕೊಡುವುದು, ಅವರ ಓದಿಗೆ ಬೇಕಾಗಿದ್ದನ್ನು ಓದಗಿಸುವುದು ಅವಶ್ಯ. ಮೊದಲು ಪೋಷಕರು ಭಯ ಪಡದೇ ಧೈರ್ಯದಿಂದ ಇದ್ದಲ್ಲಿ ಮಕ್ಕಳಿಗೂ ಪರೀಕ್ಷೆ ಎಂದರೆ ನೀರು ಕುಡಿದಂತೆ ಎಂದೆನಿಸುವುದು ಸುಲಭ.
ಸಾಮಾಜಿಕ ಜಾಲತಾಣದಿಂದ ದೂರವಿರಿ
ಮಕ್ಕಳು ಪರೀಕ್ಷೆ ಸಮಯದಲ್ಲಿ ಮೊಬೈಲ್ ಟಿ ವಿ ಬಳಕೆಯಿಂದ ಸಂಪೂರ್ಣವಾಗಿ ದೂರವಿರಬೇಕು. ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸನ್ನು ವಿಚಲಿತಗೊಳಿಸುತ್ತವೆ ಹಾಗೂ ಏಕಾಗ್ರತೆಯನ್ನು ಕಡಿಮೆಗೊಳಿಸುತ್ತವೆ. ಇದರಿಂದ ಮಕ್ಕಳು ಓದುವುದರ ಕಡೆ ಆಸಕ್ತಿ ವಹಿಸುವುದಿಲ್ಲ.
ಮಕ್ಕಳು ಪರೀಕ್ಷೆನ್ನು ಭಯದಿಂದ ಎದುರಿಸದೆ ಹಬ್ಬದಂತೆ ಆಚರಿಸಿ ಪರೀಕ್ಷೆ ಬರೆಯಬೇಕು ಆತ್ಮವಿಶ್ವಾಸ ಧನಾತ್ಮಕ ಮನೊಭಾವದಿ೦ದ ಛಲದಿಂದ ಪರೀಕ್ಷೆ ಬರೆದರೆ ನೀವು ಬಯಸಿದಷ್ಟು ಬಯಸಿದಷ್ಟು ಅಂಕಗಳ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ
ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ