ಜಗತ್ತಿನ ಮೂರು ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು : ಡಾ.ಮಹೇಶ್ ಜೋಶಿ
ದಾವಣಗೆರೆ: ಜಗತ್ತಿನಲ್ಲಿ ಮೂರೇ ಮೂರು ಭಾಷೆ ಪರಿಪೂರ್ಣ ಭಾಷೆ ಎಂದು ಗುರುತಿಸಲಾಗಿದೆ. ಅದರಲ್ಲಿ ಕನ್ನಡ. ಸಂಸ್ಕೃತ ಮತ್ತು ಗ್ರೀಕ್ ಮತ್ತೆರಡು ಭಾಷೆಗಳಾಗಿವೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಕನ್ನಡ ಅನ್ನದ ಭಾಷೆಯಾಗಬೇಕು ಎಂದು ಕಸಾಪದಿಂದ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಶಾಲೆಗಳು ಉಳಿಯಬೇಕು. ಅದಕ್ಕಾಗಿ ಮೇ 5ರಂದು ಎಸ್.ಎಲ್. ಭೈರಪ್ಪ ಅವರ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ಮಾಡಲಿದ್ದೇವೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅಭಿಪ್ರಾಯ ಮಂಡಿಸಿದರು.
ಸಮೀಪದ ಎಲೇಬೇತೂರು ಗ್ರಾಮದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ಶೇ. 20ರಷ್ಟು ಕನ್ನಡ ಶಾಲೆಗಳು ಮುಚ್ಚಿ ಹೋದವು. ಕನ್ನಡ ವೈಭವಯುತವಾಗಿ ಇದ್ದ ಶಾಲೆಗಳಲ್ಲಿ ಕೂಡ ಇಂಗ್ಲಿಷ್ ಮಾಧ್ಯಮ ತಂದಿದ್ದರಿಂದ ಅಲ್ಲಿಯೂ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಗೋಕಾಕ್ ಚಳವಳಿಯ ಮಾದರಿಯಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಚಳುವಳಿ ಮಾಡಬೇಕಾದ ದಿನಗಳು ದೂರ ಇಲ್ಲ ಎಂದು ತಿಳಿಸಿದರು.
ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಸಲು ನಾನುಕೂಡ ಬೆಂಬಲ ನೀಡುತ್ತೇನೆ. ವಿದ್ಯೆಗೆ, ಕಲೆ, ಸಂಗೀತಕ್ಕೆ ಅನ್ನ ನೀಡಿದ ಭೂಮಿ ಇದು. ನಾಡು, ನುಡಿ, ಜಲಕ್ಕೆ ತೊಂದರೆ ಎದುರಾದಾಗ ಅದರ ವಿರುದ್ಧ ಬೆವರು ಹರಿಸಿದ ಭೂಮಿ ಇದು ಎಂದು ದಾವಣಗೆರೆ ಜಿಲ್ಲೆಯನ್ನು ಬಣ್ಣಿಸಿದರು. ಸುಮಾರು 10 ಸಾವಿರಕ್ಕಿಂತ ಕಡಿಮೆ ಜನರು ಮಾತನಾಡುವ ಭಾಷೆಗಳನ್ನು ಅಳಿವಿನಂಚಿನ ಭಾಷೆಗಳು ಎಂದು ಗುರುತಿಸಲಾಗುತ್ತದೆ. ಪರಿಪೂರ್ಣ ಭಾಷೆಗಳಾದರೆ ಸ್ವಂತ ಭಾಷೆ, ಸ್ವಂತ ಲಿಪಿ, ಸ್ವಂತ ವ್ಯಾಕರಣ, ಸ್ವಂತ ಅಂಕಿ, ಬರೆದಂತೆ ಓದುವ, ಓದಿದಂತೆ ಬರೆಯುವ ಭಾಷೆ ಪರಿಪೂರ್ಣ ಭಾಷೆ ಎನ್ನಲಾಗುತ್ತದೆ. ಆದರೆ ಇಂಗ್ಲಿಷ್ ಭಾಷೆ ಬರೆದಂತೆ ಓದುವ ಭಾಷೆಯಲ್ಲ. ಪ್ರವೇಶ ಹಂತದಲ್ಲಿಯೇ ಇಂಗ್ಲಿಷ್ ಹಾರಿ ಹೋಗುತ್ತದೆ. ಹಿಂದಿಯಲ್ಲಿ ಪುಲ್ಲಿಂಗ ,ಸ್ತ್ರೀಲಿಂಗ ಮಾತ್ರ ಇರುವುದು. ಅಲ್ಲಿ ನಪುಂಸಕ ಲಿಂಗ ಯಾವುದು, ಸ್ತ್ರೀಲಿಂಗ ಯಾವುದು ಎಂಬುದು ಗೊತ್ತಾಗುವುದಿಲ್ಲ. ಹೀಗೆ ಅನೇಕ ಭಾಷೆಗಳಲ್ಲಿ ಈ ರೀತಿ ಒಂದಲ್ಲ ಒಂದು ಕೊರತೆಗಳಿವೆ ಎಂದರು.
ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷರಾದ ಶ್ರೀಮತಿ ಜಿ.ಎಸ್ ಸುಶೀಲಾದೇವಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕರುಗಳಾದ ಎಸ್.ಎ ರವೀಂದ್ರನಾಥ್, ಪ್ರೊ.ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ, ಎ.ಆರ್ ಉಜ್ಜಿನಪ್ಪ, ಮಂಜುನಾಥ್ ಕುರ್ಕಿ, ಎನ್.ಟಿ ರ‍್ರಿಸ್ವಾಮಿ ಸೇರಿದಂತೆ ಹಲವರಿದ್ದರು.