GAMMA ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚು.. ಕನ್ನಡಿಗನಿಗೆ ಒಲಿದ ಪದಕ ನೆದರ್‌ಲ್ಯಾಂಡ್ಸ್‌ನಲ್ಲಿನ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಅದ್ಧೂರಿ ತೆರೆ..
ಆಮ್ಸ್ಟರ್ಡ್ಯಾಮ್ (Amsterdam) : ಪ್ರಸಕ್ತ ವರ್ಷದ (2022ರ) ವಿಶ್ವ ‘GAMMA’ – Mixed Martial Arts ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಚಾರ್ಲ್ಸ್ ಪೀಟರ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ನೆದರ್‌ಲ್ಯಾಂಡ್ಸ್‌ನ Amsterdam ನಲ್ಲಿ ಮಾರ್ಚ್ 23 ರಿಂದ ಮಾರ್ಚ್ 27ರ ವರೆಗೆ ಈ ಪಂದ್ಯಾವಳಿ ನಡೆದಿದ್ದು, ಭಾನುವಾರ ನಡೆದ ಮುಕ್ತ ಹೆವಿ ವೇಟ್ ವಿಭಾಗದ ಸೆಮಿಫೈನಲ್ಸ್‌ನಲ್ಲಿ ಭಾರತದ ಚಾರ್ಲ್ಸ್ ಪೀಟರ್ ಅವರು ನೆದರ್ಲ್ಯಾಂಡ್ಸ್ ಬಾಕ್ಸರ್ ಮಿಶಿದ್‌ಜಾನ್ ವಾಲೆಂಟಿನೋ ವಿರುದ್ದ ಸೆಣಸಾಡಿದರು. ಹೊಡೆದಾಟ-ಬಡಿದಾಟದಲ್ಲಿ ಗಂಭೀರವಾಗಿ ಗಾಯಗೊಂಡ ಚಾರ್ಲ್ಸ್ ಪೀಟರ್ ಅವರು ವೀರೋಚಿತ ಸೋಲು ಅನುಭವಿಸಿದರು. ಆದರೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು ಈ ಬಾರಿಯ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದ್ದಾರೆ. ಈ ಪ್ರತಿಷ್ಠೆಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಚಾರ್ಲ್ಸ್ ಪೀಟರ್ ಅವರು ಭಾರತವನ್ನು ಪ್ರತಿನಿಧಿಸಿದ್ದು, ಇದೀಗ ಭಾರತಕ್ಕೆ ಕಂಚು ಪದಕವನ್ನು ಗೆದ್ದು ತರುವ ಮೂಲಕ ವೀರ ಕನ್ನಡಿಗನಾಗಿ ಗುರುತಾಗಿದ್ದಾರೆ.
ತ್ರಿವರ್ಣ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿದ್ದ ಕ್ರೀಡಾ ಸಚಿವರು.
ಅದೇ ಧ್ವಜ ಕೀರ್ತಿ ಪತಾಕೆಯಾಯಿತು:
ಮಾರ್ಚ್ 20ರಂದು ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ನೆದರ್‌ಲ್ಯಾಂಡ್ಸ್‌ಗೆ ತೆರಳಿದ್ದ ಚಾರ್ಲ್ಸ್ ಪೀಟರ್‌ಗೆ ಕ್ರೀಡಾ ಸಚಿವ ನಾರಾಯಣ ಗೌಡ ಅವರು ವಿಧಾನಸೌಧದಲ್ಲಿ ತ್ರಿವರ್ಣ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿ ಬೀಳ್ಕೊಟ್ಟಿದ್ದರು. ಅದೇ ರಾಷ್ಟ್ರಧ್ವಜವನ್ನು ಭಾರತದ ಕೀರ್ತಿ ಪತಾಕೆಯಾಗಿ ಚಾರ್ಲ್ಸ್ ಪೀಟರ್ ಪ್ರದರ್ಶಿಸಿದ್ದಾರೆ.
—
ಯಾರು ಈ ಚಾರ್ಲ್ಸ್ ಪೀಟರ್?
ಬೆಂಗಳೂರಿನ ಖ್ಯಾತ ಬಾಕ್ಸರ್ ಬಾಲರಾಜ್ ಅವರ ಪುತ್ರ ಚಾರ್ಲ್ಸ್ ಪೀಟರ್ Mixed Martial Arts ಕ್ರೀಡೆಯಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದವರು.
6 ಬಾರಿ Mixed Martial Artsನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿರುವವರು.
2 ಬಾರಿ Mixed Martial Arts ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸ್ಪರ್ಧಿಸಿದ್ದಾರೆ.
2019ರ GAMMA’ – Mixed Martial Arts ಚಾಂಪಿಯನ್‌ಶಿಪ್‌ನಲ್ಲಿ ‘ಹೆವಿ ವೈಟ್’ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ.
Mixed Martial Arts ಸ್ಪರ್ದಾಳುಗಳಿಗೆ ನಿರಂತರ ತರಬೇತಿ ನೀಡುತ್ತಿರುವ ಚಾರ್ಲ್ಸ್ ಪೀಟರ್ ಅವರು, ಈ ತರಬೇತಿಗಾಗಿಯೇ ಬೆಂಗಳೂರಿನ ಹೆಬ್ಬಾಳ ಕೆಂಪಾಪುರದಲ್ಲಿ ತರಬೇತಿ ಕೇಂದ್ರ ನಡೆಸುತ್ತಿದ್ದಾರೆ. IIFC ಹೆಸರಿನ ಈ ತರಬೇತಿ ಕೇಂದ್ರದಲ್ಲಿ ಪ್ರತೀ ವರ್ಷ 25ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.
ಚಾರ್ಲ್ಸ್ ಪೀಟರ್ ಅವರ ಪುತ್ರಿ ಆ್ಯಂಡ್ರಿ ಡೆಲ್ಲಿಸ್ ಕೂಡಾ ಇದೇ IIFC ತರಬೇತಿ ಕೇಂದ್ರದಲ್ಲಿ Mixed Martial Arts ತರಬೇತಿ ಪಡೆಯುತ್ತಿದ್ದು, 2019ರಲ್ಲಿ ಕಿರಿಯರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ.