ಪಾಲಿಕೆಯ ಖರ್ಚುವೆಚ್ಚ ಲೆಕ್ಕಾಚಾರ ಯಾವ ರೀತಿ ಇದೆ ಗೊತ್ತಾ! ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ನ ಸಂಪೂರ್ಣ ಮಾಹಿತಿ ಗರುಡ ವಾಯ್ಸ್ ನಲ್ಲಿ

ದಾವಣಗೆರೆ : ಪಾಲಿಕೆಯ ಆದಾಯ ಸಂಪನ್ಮೂಲಗಳು ರಾಜ್ಯ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವ ಹಾಗೂ ಬಂಡವಾಳ ಅನುದಾನಗಳು ಹಾಗೂ ಆಸ್ತಿ ತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಿಗೆ, ಬಾಡಿಗೆ ಇತ್ಯಾದಿಗಳನ್ನು ಒಳಗೊಳ್ಳುವ ಸ್ವಂತ ಮೂಲಗಳ ಆದಾಯಗಳನ್ನು ಒಳಗೊಂಡಿದ್ದು 2022-23ನೇ ಆರ್ಥಿಕ ವರ್ಷದಲ್ಲಿ ಈ ಕೆಳಕಂಡಂತೆ ಆದಾಯಗಳನ್ನು ನಿರೀಕ್ಷಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸ್ವೀಕೃತವಾಗುವ ಅನುದಾನಗಳು! ರಾಜ್ಯ ಸರ್ಕಾರದ ರಾಜಸ್ವ ಅನುದಾನಗಳು
ರಾಜ್ಯ ಸರ್ಕಾರವು ಹಲವು ರೀತಿಯ ರಾಜಸ್ವ ಅನುದಾನಗಳನ್ನು ನೀಡುತ್ತಿದ್ದು, 2022-23ನೇ ಸಾಲಿಗೆ ಈ ಕೆಳಕಂಡಂತೆ ಅನುದಾನಗಳ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ.
ರಾಜ್ಯ ಹಣಕಾಸು ಆಯೋಗದ (ಎಸ್.ಎಫ್.ಸಿ) ಮುಕ್ತನಿಧಿ ಅನುದಾನ:
ರಾಜ್ಯ ಸರ್ಕಾರವು ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಅನುಸಾರ ಪ್ರವೇಶ ತೆರಿಗೆ ಅವತರಣ (Entry Tax Devolution) ದಡಿ ಬಂಡವಾಳ ಆಸ್ತಿಗಳ ಸೃಜನೆಗಾಗಿ ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರದ 2022-23ನೇ ಸಾಲಿನ ಆಯ-ವ್ಯಯದಲ್ಲಿ ರೂ. 750.00 ಲಕ್ಷಗಳ ಹಂಚಿಕೆ ಮಾಡಲಾಗಿದೆ. ಸದರಿ ಅನುದಾನವನ್ನು ಸರ್ಕಾರದ ಮಾರ್ಗಸೂಚಿಗಳಂತೆ ಕ್ರಿಯಾ ಯೋಜನೆ ತಯಾರಿಸಿ ನಗರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಳಕೆ ಮಾಡಲು ಕ್ರಮ ವಹಿಸಲಾಗುವುದು.
ರಾಜ್ಯ ಹಣಕಾಸು ಆಯೋಗದ (ಎಸ್.ಎಫ್.ಸಿ) ವಿದ್ಯುತ್ ಅನುದಾನ:
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು, ಕಿರು ನೀರು ಸರಬರಾಜು ಘಟಕಗಳು, ನೀರು ಶುದ್ದೀಕರಣ ಘಟಕಗಳ ಹಾಗೂ ವಿತರಣಾ ವ್ಯವಸ್ಥೆಗೆ ಸಂಬಂಧಿಸಿದ ವಿದ್ಯುತ್ ಶುಲ್ಕ ಪಾವತಿ ಮತ್ತು ಇನ್ನಿತರ ವಿದ್ಯುತ್ ಬಿಲ್ಗಳ ವಿದ್ಯುತ್ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರವು ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಅನುಸಾರ ವಿದ್ಯುತ್ ಬಿಲ್ ಪಾವತಿಗೆ ಅನುದಾನ ನೀಡುತ್ತಿದ್ದು, 2022-23ನೇ ಸಾಲಿಗೆ ಒಟ್ಟು ರೂ. 2775.00 ಲಕ್ಷಗಳ ಅನುದಾನವನ್ನು ಸರ್ಕಾರದಿಂದ ಹಂಚಿಕೆ ಮಾಡಲಾಗಿದೆ.
ರಾಜ್ಯ ಹಣಕಾಸು ಆಯೋಗದ ಎಸ್.ಎಫ್.ಸಿ. ವೇತನ ಅನುದಾನ:
ಪಾಲಿಕೆಯ ಎಲ್ಲಾ ಖಾಯಂ ಅಧಿಕಾರಿ ಹಾಗೂ ನೌಕರರ ವೇತನ ಪಾವತಿಗಾಗಿ ಎಸ್.ಎಫ್.ಸಿ ಮೂಲಕ ಪ್ರತಿ ತ್ರೈಮಾಸಿಕ ಅವಧಿಗೆ ಒಂದು ಕಂತಿನ0ತೆ ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ವೇತನ ಅನುದಾನವನ್ನು ರಾಜ್ಯ ಸರ್ಕಾರವು ನೀಡುತ್ತಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ರೂ. 3531.00 ಲಕ್ಷಗಳ ಅನುದಾನವನ್ನು ರಾಜ್ಯ ಸರ್ಕಾರದ 2022-23ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡಿದೆ. ಬಿಡುಗಡೆಯಾಗುವ ಅನುದಾನವನ್ನು ನೌಕರರ ಮಾಸಿಕ ವೇತನ ಪಾವತಿ, ಗಳಿಕೆ ರಜೆ ನಗಧೀಕರಣ, ನಿವೃತ್ತಿ ಸೌಲಭ್ಯಗಳನ್ನು ಹಾಗೂ ವೇತನ ಸಂಬ0ಧಿಸಿದ ಇನ್ನಿತರೆ ಪಾವತಿಗಳನ್ನು ಭರಿಸಲು ಬಳಸಲಾಗುವುದು.