ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಅಲಯನ್ಸ್ ನ್ಯಾಯಾಂಗ ತರಬೇತಿ ಅಕಾಡೆಮಿ ಉದ್ಘಾಟನೆ

ಆನೇಕಲ್ : ಪಟ್ಟಣಕ್ಕೆ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಅಲಯನ್ಸ್ ನ್ಯಾಯಾಂಗ ತರಬೇತಿ ಅಕಾಡೆಮಿಯನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಜಾನ್ ಮೈಕಲ್ ಕುನ್ಹಾ ಶನಿವಾರ ಉದ್ಘಾಟಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಜಾನ್ ಮೈಕಲ್ ಕುನ್ಹಾ ಮಾತನಾಡಿ ಜಾಗತೀಕರಣದ ಪ್ರಭಾವದಿಂದಾಗಿ ವಕೀಲರಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಾಗಿವೆ. ಹಾಗಾಗಿ ವಕೀಲರು ತಮ್ಮ ವೃತ್ತಿ ನೈಪುಣ್ಯತೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಬೆಳೆಸಿಕೊಳ್ಳಬೇಕಾಗಿದೆ. ಇದಕ್ಕೆ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಅಕಾಡೆಮಿ ಸಜ್ಜುಗೊಳಿಸಬೇಕು ಎಂದರು.
Inauguration of the Alliance Judicial Training Academy at Alliance University by high court retired justice john Michel kunha
ಐದು ವರ್ಷದ ಎಲ್ಎಲ್ಬಿ ಪದವಿ ಪಡೆದ ನಂತರ ವೃತ್ತಿ ಅನುಭವಗಳನ್ನು ಗಳಿಸಿಕೊಳ್ಳಬೇಕಾದರೆ ಕನಿಷ್ಠ ಐದು ವರ್ಷಗಳ ಅವಧಿ ಬೇಕಾಗುತ್ತದೆ. ಹತ್ತು ವರ್ಷಗಳ ವೇಳೆಗೆ ವಿಷಯಗಳು, ವಸ್ತುಸ್ಥಿತಿಗಳು ಬದಲಾಗಿರುತ್ತವೆ. ಹಾಗಾಗಿ 10 ವರ್ಷ ಸಮಯವನ್ನು ವ್ಯರ್ಥ ಮಾಡುವ ಬದಲಿಗೆ ಪದವಿಯ ಜೊತೆಯಲ್ಲಿಯೇ ಹೆಚ್ಚಿನ ಜ್ಞಾನ ಅನುಭವಗಳನ್ನು ಪಡೆದರೆ ಪದವಿ ಮುಗಿಯುತ್ತಿದ್ದಂತೆ ವೃತ್ತಿಯಲ್ಲಿ ಪ್ರಾವಿಣ್ಯತೆಯನ್ನು ಪಡೆಯಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು ಎಂದರು.
ವಕೀಲ ವೃತ್ತಿ ಅತ್ಯಂತ ಪ್ರವಿತ್ರವಾದ ವೃತ್ತಿ ಕಕ್ಷಿದಾರನಿಗೆ ನ್ಯಾಯ ಒದಗಿಸುವುದು ವಕೀಲನ ಬದ್ದತೆಯಾಗಿರಬೇಕು. ವಕೀಲರು ವೃತ್ತಿಯಲ್ಲಿ ಯಶಸ್ವಿಯಾಗಬೇಕಾದರೆ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಕಲಿಸಿಕೊಡದ ಅನುಭವಗಳನ್ನು ಮಾನವೀಯ ಮೌಲ್ಯಗಳು ಕಲಿಸಿಕೊಡುತ್ತವೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನವೀಯ ದೃಷ್ಠಿಯಲ್ಲಿ ಕಾನೂನನ್ನು ನೋಡಬೇಕು ಎಂದರು.
ಬಹುರಾಷ್ಟ್ರೀಯ ಕಂಪನಿಗಳು, ಉದ್ಯಮಗಳಲ್ಲಿ ಕಾನೂನು ಸಲಹೆ ಸೇರಿದಂತೆ ವಿವಿಧೆಡೆ ಉತ್ತಮ ಅವಕಾಶಗಳಿವೆ. ಅವಕಾಶಗಳನ್ನು ಪಡೆಯಲು ಪ್ರಾವಿಣ್ಯತೆಯನ್ನು ಬೆಳೆಸಿಕೊಳ್ಳಬೇಕು. ಜಾಗತಿಕ ಮಟ್ಟಕ್ಕನುಗುಣವಾಗಿ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದರು.
ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಅಭಯ್.ಜಿ.ಛೆಬ್ಬಿ ಮಾತನಾಡಿ ಕಾನೂನು ವಿದ್ಯಾರ್ಥಿಗಳಿಗೆ ಪದವಿ ಅವಧಿಯಲ್ಲಿ ತರಬೇತಿ, ಮಾರ್ಗದರ್ಶನ, ಕರಡು ತಯಾರಿಕೆ, ವೃತ್ತಿ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ. ವಕೀಲರು, ನಿವೃತ್ತ ನ್ಯಾಯಾಧೀಶರು, ನ್ಯಾಯಾಂಗ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದವರು ಅಕಾಡೆಮಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಅಲಯನ್ಸ್ ವಿಶ್ವವಿದ್ಯಾಲಯದ ಐದು ಮಂದಿ ವಿದ್ಯಾರ್ಥಿಗಳು ನ್ಯಾಯಾಂಗ ಪರೀಕ್ಷೆ ತೇರ್ಗಡೆಯಾಗಿದ್ದಾರೆ ಎಂದರು.
ಅಲಯನ್ಸ್ ಕಾನೂನು ಶಾಲೆಯ ಡೀನ್ ಡಾ.ಕಿರಣ್.ಡಿ.ಗಾರ್ಡನರ್ ಇದ್ದರು.