ಸಗಣಿ ಬೆರಣಿ ಕೊಡಿ, ಹಣ ಪಡೆದುಕೊಳ್ಳಿ
ದಾವಣಗೆರೆ: ಗೊಡ್ಡು ಹಸುಗಳೆಂದು, ಕಟುಕರಿಗೆ ನೀಡುವ ಕೆಲ ರೈತರಿಗೆ ಸಂತಸದ ಸುದ್ದಿಯೊಂದನ್ನು ಶ್ರೀ ಸುರಭಿ ಗೋರಕ್ಷಾ ದೀಕ್ಷಾ ಎಂಬ ಸಂಸ್ಥೆ ಕೊಟ್ಟಿದೆ..ಹಾಗಾದ್ರೆ ಈ ಸುದ್ದಿ ಏನು ಏನೆಂಬ ಕುತುಹೂಲ ಎಲ್ಲರಿಗೂ ಇದ್ದೇ ಇರುತ್ತದೆ…
ಹೌದು..ಎಲ್ಲರೂ ಆರ್ಥಿಕತೆಗಾಗಿ ಗೋವನ್ನು ಸಾಕುತ್ತಿದ್ದಾರೆ..ಮನೆಯಲ್ಲಿರುವ ಹಸು ವಯಸ್ಸಾದ ಮೇಲೆ ಅದು ಕಟುಕರ ಪಾಲಾಗುವ ಹಿನ್ನೆಲೆಯಲ್ಲಿ ಶ್ರೀ ಸುರಭಿ ಗೋರಕ್ಷಾ ದೀಕ್ಷಾಯಜ್ಞದ ಮೂಲಕ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷ ಎಸ್.ಎಲ್.ಆನಂದಪ್ಪ ಪ್ರತಿ ಜಿಲ್ಲೆಯಲ್ಲಿ ಸಂಘವೊಂದನ್ನು ತೆರೆಯಲು ಮುಂದಾಗಿದ್ದಾರೆ. ಇದರಲ್ಲಿ ಅಧ್ಯಕ್ಷಘಿ, ಕಾರ್ಯದರ್ಶಿ ಸೇರಿದಂತೆ ಎಲ್ಲರೂ ಇರುತ್ತಾರೆ. ಕಟುಕರಿಗೆ ನೀಡುವ ಹಸುವಿನಿಂದ ಬರುವ ಸಗಣಿಯನ್ನು ಬಳೆ ಆಕಾರದಲ್ಲಿ 1 ಲಕ್ಷ ಬೆರಣಿ ಮಾಡಬೇಕು. 1 ಲಕ್ಷ ಬೆರಣಿಗೆ ಈ ಸಂಸ್ಥೆ 20 ಸಾವಿರ ರೂ.ಕೊಡಲಿದೆ. ಸದ್ಯ ದಾವಣಗೆರೆಯಲ್ಲಿ ಇನ್ನೊಂದು ತಿಂಗಳಿನಲ್ಲಿ ಸಂಘ ಓಪನ್ ಆಗಲಿದೆ. ಇದಕ್ಕಾಗಿ ಸರಕಾರವು ಆರ್ಥಿಕವಾಗಿ ಸಹಾಯ ಮಾಡಲಿದೆ ಎಂದು ಎಸ್.ಎಲ್.ಆನಂದಪ್ಪ ಹೇಳುತ್ತಾರೆ. ಈ ಬೆರಣಿಯನ್ನು ಯಜ್ಞಕುಂಡದಲ್ಲಿ ಬಳಸಲಾಗುವುದು. ಯಜ್ಞದಲ್ಲಿ ಬಳಸುವ ಸಗಣಿಯಿಂದ ವಾತಾವರಣದ ಸುತ್ತಮುತ್ತ ಶುದ್ದ ಗಾಳಿ ಸಿಗುತ್ತದೆ. ಅಲ್ಲದೇ ಯಾವುದೇ ಕಾಯಿಲೆಗಳು ಬರೋದಿಲ್ಲ ಎಂಬುದು ಇವರ ಅಂಬೋಣ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಹೊರವಲಯದಲ್ಲಿರುವ ಬೀರೇಶ್ವರ ಭವನದಲ್ಲಿ ದೀಕ್ಷಾಯಜ್ಞವನ್ನು ಹತ್ತು ದಿನಗಳ ಕಾಲ ಬಳಸಲಾಗುತ್ತಿದೆ..ಈ ಯಜ್ಞದಲ್ಲಿ ಪ್ರತಿ ದಿನ 10 ಸಾವಿರ ಬೆರಣಿಗಳನ್ನು ಬಳಸಲಾಗುತ್ತಿದೆ. ಹತ್ತು ದಿನಕ್ಕೆ 1 ಲಕ್ಷ ಬೆರಣಿ ಹಾಕಿ ಹೋಮ ಮಾಡಲಾಗುತ್ತಿದೆ. ಈ ಯಜ್ಞ ಕೇವಲ ಹಿಂದೂ ಧರ್ಮದವರನ್ನು ಮಾತ್ರವಲ್ಲದೇ ಸರ್ವಧರ್ಮೀಯರನ್ನೂ ತನ್ನತ್ತ ಸೆಳೆಯುತ್ತಿದೆ.
ಗೋರಕ್ಷಣೆ ಬಗ್ಗೆ ತಿಳಿದವರು ಗಂಟೆಗಟ್ಟಲೆ ಮಾತಾಡಬಹುದು. ಆದರೆ ಅಂತಿಮವಾಗಿ ಗೋರಕ್ಷಣೆ ಮಾಡಬೇಕಾದವರು ರೈತರೇ. ಅಂತಹ ರೈತರಲ್ಲಿ ಜಾಗತಿ ಮೂಡಿಸಿ ಗೋವುಗಳ ರಕ್ಷಣೆಯಲ್ಲಿ ತೊಡಗಿಸುವ ಸದುದ್ದೇಶದೊಂದಿಗೆ ಶ್ರೀ ಸುರಭಿ ಗೋರಕ್ಷಾ ದೀಕ್ಷಾಯಜ್ಞದ ಮೂಲಕ ವೌನಕ್ರಾಂತಿಯೊಂದು ಸದ್ದಿಲ್ಲದೇ ನಡೆಯುತ್ತಿದೆ.
ಹೆಸರು ಕೇಳಿದಾಕ್ಷಣ ಇದೊಂದು ಧಾರ್ಮಿಕ ಕಾರ್ಯಕ್ರಮ ಅನಿಸಬಹುದು. ಆದರೆ ಇದರ ಪರಿಕಲ್ಪನೆಯೇ ಗ್ರಾಮೀಣ ಪ್ರದೇಶದ ರೈತರನ್ನು ಜಾನುವಾರು
ಸಾಕಣೆಯಲ್ಲಿ ತೊಡಗಿಸುವುದಾಗಿದೆ. ರೈತರು ಹಾಗೂ ಗೋವುಗಳು ಗ್ರಾಮದಲ್ಲೇ ಉಳಿಯಬೇಕು, ಹಳ್ಳಿಯ ಮನೆ-ಮನೆಯೂ ಗೋಶಾಲೆಯಾಗಬೇಕು ಎಂಬುದು ಇದರ ಹೂರಣ. ಇಂತಹದ್ದೊಂದು ಆಶಯದೊಂದಿಗೆ ನಗರದ ಹೊರವಲಯದಲ್ಲಿರುವ ಬೀರೇಶ್ವರ ಭವನದಲ್ಲಿ ಆಯೋಜನೆಗೊಂಡಿರುವ ದೀಕ್ಷಾಯಜ್ಞವು ಸರ್ವಧರ್ಮೀಯರನ್ನೂ ತನ್ನತ್ತ ಸೆಳೆಯುತ್ತಿದೆ.
ಪ್ರಸ್ತುತ ಕಷಿ ಹಿಂದಿನಂತೆ ಗೋ ಕೇಂದ್ರಿತವಾಗಿ ಉಳಿದಿಲ್ಲ. ಉಳುಮೆ ಕೆಲಸಕ್ಕೆ ಬಾರದ ಎತ್ತುಗಳಿಗೆ, ಹಾಲು ಕೊಡದ ಹಸುಗಳಿಗೆ ಕಸಾಯಿಖಾನೆಯೇ
ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಹಾಲು, ಮೊಸರು, ಮಜ್ಜಿಗೆ ಬೆಣ್ಣೆ, ತುಪ್ಪ ಮಾತ್ರವಲ್ಲದೆ, ಜಾನುವಾರುಗಳು ಜೀವನ ಪರ್ಯಂತ ನೀಡುವಸಗಣಿ, ಮೂತ್ರವೂ ಆದಾಯ ತಂದುಕೊಡಬಹುದು ಎಂಬ ಚಿಂತನೆಯನ್ನು ರೈತರಲ್ಲಿ ಬಿತ್ತುವ ಕೆಲಸ ಯಜ್ಞದ ಮೂಲಕ ಆಗುತ್ತಿದೆ. 10 ದಿನಗಳ ಕಾಲ ನಡೆಯುತ್ತಿರುವ ಈ ಯಜ್ಞಕ್ಕಾಗಿ ದಿನಕ್ಕೆ 10 ಸಾವಿರದಂತೆ ಒಟ್ಟು 1 ಲಕ್ಷ ಬೆರಣಿಗಳಿಗೆ ಬೇಕಾಗುವಷ್ಟು ಗೋಮಯವನ್ನು ರೈತರಿಂದ ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಸಮಿತಿಗಳನ್ನು ರಚಿಸಿ, ಸರ್ಕಾರದ ಸಹಕಾರದೊಂದಿಗೆ ಗೋಮಯ, ಗೋಮೂತ್ರ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ.
ಆಂಧ್ರಪ್ರದೇಶ ವಿಜಯವಾಡ ಕನಕದುರ್ಗ ದೇವಾಲಯದ ಪ್ರಧಾನ ಅರ್ಚಕರ ವಂಶಸ್ಥ ಗೋಸ್ವಾಮಿ ಮಹೀಕಿರಣ್ ಶರ್ಮ ಸಾರಥ್ಯದಲ್ಲಿ ಡಿಸೆಂಬರ್ 24ರಿಂದ
ಪ್ರಾರಂಭಗೊಂಡಿರುವ ಯಜ್ಞವು 2023 ಜನವರಿ 3ರವರೆಗೆ ನಡೆಯಲಿದೆ. ಇದೇ ರೀತಿ ದೇಶದ ನಾನಾ ಭಾಗಗಳಲ್ಲಿ 12 ಯಜ್ಞಗಳನ್ನು ಆಯೋಜಿಸಿದ್ದು, ದಾವಣಗೆರೆಯಲ್ಲಿ ನಡೆಯುತ್ತಿರುವ 13ನೇ ಯಜ್ಞ ಕಾರ್ಯದಲ್ಲಿ ಪ್ರತಿದಿನ ನೂರಾರು ಜನರು ಪಾಲ್ಗೊಂಡು, ಗೋರಕ್ಷಣೆಗೆ ಸಂಕಲ್ಪ ದೀಕ್ಷೆ ಪಡೆಯುತ್ತಿದ್ದಾರೆ. ದೇಸೀ ಗೋವುಗಳ ನಾಲ್ಕೂವರೆ ಟನ್ ಸಗಣಿ ಸಂಗ್ರಹಿಸಿದ್ದು, ಸುಮಾರು 45 ಮಹಿಳಾ ಸಂಘಗಳ ಸದಸ್ಯೆಯರು ಒಂದು ತಿಂಗಳ ಕಾಲ ಶ್ರಮವಹಿಸಿ, ಯಜ್ಞಕ್ಕೆ ಬಳಸಲು ಮಂತ್ರಪೂರ್ವಕವಾಗಿ 1 ಲಕ್ಷ ಬೆರಣಿ ತಯಾರಿಸಿದ್ದಾರೆ. ಯಜ್ಞದ ಪ್ರಧಾನ ಸೇವಾಕರ್ತರಾದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷ ಎಸ್.ಎಲ್.ಆನಂದಪ್ಪ ಕಳೆದ ಎರಡೂವರೆ ತಿಂಗಳಿನಿಂದ ಸಿದ್ಧತೆ ನಡೆಸಿ, ಯಜ್ಞದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶ್ರೀ ಕಷ್ಣ ಹಾಗೂ ಬಲರಾಮರು ದೇಸೀ ಗೋವು ಮತ್ತು ಭಾರತೀಯ ಕಷಿ ರಕ್ಷಣೆಯ ಸಂಕೇತವಾಗಿದ್ದಾರೆ. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಗೋರಕ್ಷಣೆಗೆ ಬಹುದೊಡ್ಡ ಪ್ರೇರಣೆ ನೀಡುತ್ತಿದ್ದಾರೆ. ಮುಂದೆ ದೇಶದ ವಿವಿಧೆಡೆ ಇದೇ ರೀತಿಯ ದೀಕ್ಷಾಯಜ್ಞಗಳನ್ನು ಆಯೋಜಿಸುವ ಜೊತೆಗೆ ಇನ್ನೊಂದು ವರ್ಷದಲ್ಲಿ ಶ್ರೀ ಸುರಭಿ ಗೋಮಾತಾ ಮಹಿಮಾ ಎಂಬ ಹೆಸರಿನಲ್ಲಿ ಆನಿಮೇಷನ್ ಚಿತ್ರವನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. 14 ಭಾಷೆಗಳಲ್ಲಿ ತಯಾರಾಗುವ ಚಿತ್ರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಬಿಡುಗಡೆ ಮಾಡಿಸುವ ಯೋಚನೆ ಇದೆ ಎನ್ನುತ್ತಾರೆ ಗೋಸ್ವಾಮಿ ಮಹೀಕಿರಣ್ ಶರ್ಮ.
ಆರ್ಥಿಕ ಒತ್ತಡಕ್ಕೆ ಸಿಲುಕಿ ವಯಸ್ಸಾದ ಗೋವುಗಳನ್ನು ಸಾಕಲು ರೈತರು ತಾತ್ಸಾರ ಮಾಡುತ್ತಾರೆ. ಅಂತಹ ಗೋವುಗಳಿಂದ ದೊರೆಯುವ ಗೋಮಯ, ಗೋಮೂತ್ರದಿಂದ ಆದಾಯ ಬರುವ ಪದ್ಧತಿಯನ್ನು ರೈತರಿಗೆ ತಿಳಿಸುವುದು ಅವಶ್ಯಕವಾಗಿದೆ. ಇದರಿಂದ ರೈತರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಜೊತೆಗೆ ಗೋವಧೆ ತಡೆಯಲೂ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಆಯೋಜನೆಗೊಂಡಿರುವ ದೀಕ್ಷಾಯಜ್ಞವು ಗೋರಕ್ಷಣೆಗೆ ಹೊಸ ಪರಿಭಾಷೆ ಹುಟ್ಟುಹಾಕಿದಂತಾಗಿದೆ.