ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಾಧನ ಸಮಾವೇಶ

ದಾವಣಗೆರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಬಾಡ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಸಾಧನ ಸಮಾವೇಶ ಹಾಗೂ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭವು ಈಚೆಗೆ ತಾಲ್ಲೂಕಿನ ಬಾಡ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸರ್ಕಾರ ಮಾಡದಿರುವ ಕೆಲಸಗಳನ್ನು ಗುರುಪರಂಪರೆಯ ಮಠಮಾನ್ಯಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಹಲವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗಿದೆ ಎಂದು ಹೇಳಿದರು.
ಬಾಡ ಗ್ರಾಪಂ ಅಧ್ಯಕ್ಷ ಜಿ.ಜೆ. ನಿರಂಜನಮೂರ್ತಿ ಅಧ್ಯಕ್ಷತೆ ನಡೆದ ಕಾರ್ಯಕ್ರಮವನ್ನು ಟ್ರಸ್ಟ್ನ ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ ನಾಗನಾಳ ಉದ್ಘಾಟಿಸಿದರು, ಗ್ರಾಪಂ ಉಪಾಧ್ಯಕ್ಷರಾದ ಶೈಲಜಾ ಚಂದ್ರಪ್ಪ, ಟ್ರಸ್ಟ್ ಯೋಜನಾಧಿಕಾರಿ ಹೆಚ್. ಬಾಬು, ಗ್ರಾಪಂ ಸದಸ್ಯರಾದ ಎಂ.ಬಿ. ಸುರೇಶ್, ಮಂಜುಳಮ್ಮ ರುದ್ರಪ್ಪ, ಜೆ.ಬಿ. ಕುಬೇರಪ್ಪ, ನಂದನ ಕುಮಾರ್ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

 
                         
                       
                       
                       
                       
                       
                       
                      