ದೇವನಗರಿಯಲ್ಲಿ ಫೆ.26ರಂದು ಅದ್ಧೂರಿ `ಚಿತ್ರಸಂತೆ’
ದಾವಣಗೆರೆ :ಜ. 7- ಬರಲಿರುವ ಫೆ. 26ರಂದು ಭಾನುವಾರ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಅದ್ದೂರಿಯಾಗಿ ಚಿತ್ರಸಂತೆ ಏರ್ಪಡಿಸಲಾಗುತ್ತಿದೆ.
ಕಳೆದ ವರ್ಷದ ಚಿತ್ರಸಂತೆ ನಿರೀಕ್ಷೆಗಿಂತ ಹೆಚ್ಚು ಯಶಸ್ಸು ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷದಕ್ಕಿಂತ ಹೆಚ್ಚಿನದಾಗಿ ಚಿತ್ರಸಂತೆ ನಡೆಸುವುದಾಗಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅನೇಕ ಹೆಸರಾಂತ ಕಲಾವಿದರ ಚಿತ್ರಗಳು ಜನ ಸಾಮಾನ್ಯರಿಗೆ ತಲುಪುವುದಿಲ್ಲ. ಚಿತ್ರಸಂತೆ ಏರ್ಪಡಿಸುವುದರಿಂದ ಕಲಾವಿದರಿಗೆ ಉತ್ತಮ ವೇದಿಕೆ ನಿರ್ಮಿಸಿದಂತಾಗುತ್ತದೆ. ಚಿತ್ರಗಳನ್ನು ಜನರು ಕೊಂಡುಕೊಳ್ಳುತ್ತಾರೆ. ಇದರಿಂದ ಕಲಾವಿದರಿಗೆ ನೆರವು ನೀಡಿದಂತಾಗುತ್ತದೆ ಎಂದು ಹೇಳಿದರು.ಹಿಂದಿನ ಸಂತೆಯಲ್ಲಿ 100 ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು. ಈ ಬಾರಿ ಸ್ಟಾಲ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, 150 ಸ್ಟಾಲ್ ನಿರ್ಮಿಸಲಾಗುವುದು. ಈ ವರ್ಷವೂ ಕಲಾವಿದರಿಗೆ ಮೂರು ವಿಭಾಗದಲ್ಲಿ ತಲಾ ಮೂರು ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
26ರಂದು ಬೆಳಿಗ್ಗೆ 11 ಗಂಟೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ. ರಿಷ್ಯಂತ್ ಇತರರು ಉಪಸ್ಥಿತರಿರಲಿದ್ದಾರೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಹೊರ ರಾಜ್ಯದ ಕಲಾವಿದರೂ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದು, ಯಾವುದೇ ಕೊರತೆ ಉಂಟಾಗದಂತೆ ಊಟ, ಉಪಹಾರ, ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಚಿತ್ರಸಂತೆಯಲ್ಲಿ ಭಾಗವಹಿಸುವ ಕಲಾವಿದರ ಅರ್ಜಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಬಾಡಿ ರಾಕರ್ಸ್ ಜಿಮ್, ಭರತ್ ಸೇವಾ ಟ್ರಸ್ಟ್ ಹಾಗೂ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಚಿತ್ರ ಸಂತೆ ಏರ್ಪಡಿಸಲಾಗಿದ್ದು, ಕಲಾವಿದರು ಮಾಹಿತಿಗಾಗಿ ಡಿ.ಶೇಷಾಚಲ ಮೊ. 9844262279, ರವಿ ಹುದ್ದಾರ್-9448404419ಗೆ ಸಂಪರ್ಕಿಸುವಂತೆ ಅಜಯ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿ.ಶೇಷಾಚಲ, ರವಿ ಹುದ್ದಾರ್, ವಿಜಯ ಕುಮಾರ್ ಜಾಧವ್, ಅಸೋಕ್ ಗೋಪನಾಳ್, ಜೀವನ್, ಶಿವಕುಮಾರ್, ಸಿ.ಎನ್. ಸಂತೋಷ್, ರಾಕೇಶ್, ಆನಂದ್, ಸಂಜು, ರವಿಕಿರಣ್, ಗಣೇಶ್ ಆಚಾರ್ ಉಪಸ್ಥಿತರಿದ್ದರು.