27ರಂದು `ಶ್ರೀ ಹಿಮಗಿರಿಭವನ’ ನೂತನ ಕಟ್ಟಡದ ಉದ್ಘಾಟನೆ : ಶಾಂತಲಿಂಗ ಶ್ರೀ
ದಾವಣಗೆರೆ: ಇದೇ 27ರಂದು ಶುಕ್ರವಾರ `ಶ್ರೀ ಹಿಮಗಿರಿಭವನ’ ನೂತನ ಕಟ್ಟಡದ ಉದ್ಘಾಟನೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸನಾತನ ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಹರಿಹರ ತಾಲ್ಲೂಕು ಶಿವನಹಳ್ಳಿ (ಷಂಶಿಪುರ) ಗ್ರಾಮದ ಬಳಿಯ ವೈರಾಗ್ಯಧಾಮದಲ್ಲಿ `ಶ್ರೀ ಹಿಮಗಿರಿಭವನ’ ನಿರ್ಮಿಸಲಾಗುತ್ತಿದ್ದು, ಹಿಮಾಲಯದಲ್ಲಿರುವಂತೆಯೇ ಶಿಲೆಯಿಂದ ಶಿಲಾ ಮಂಟಪ, ಗುರುಭವನ, ಭಕ್ತಿ ನಿವಾಸ, ಪ್ರಸಾದ ನಿಲಯಗಳನ್ನು ನಿರ್ಮಿಸುವ ಉದ್ದೇಶಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಕೇದಾರ ಶ್ರೀಗಳು ಕರ್ನಾಟಕಕ್ಕೆ ಆಗಮಿಸಿದಾಗ ಅವರು ತಂಗಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಆ ಕಾರಣ ಮಧ್ಯ ಕರ್ನಾಟಕದ ತವರೂರಿನಂತಿರುವ ದಾವಣಗೆರೆಯನ್ನು ಆಯ್ಕೆ ಮಾಡಿಕೊಂಡ ಹಿಮಗಿರಿ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
27ರಂದು ಬೆಳಿಗ್ಗೆ 8 ಗಂಟೆಯಿಂದ ಧರ್ಮ ಕಂಕಣ ಧಾರಣೆ, 8.48ರಿಂದ ಶ್ರೀಮದ್ರಾಂಭಾಪುರಿ ಹಾಗೂ ಶ್ರೀಮತ್ಕೇದಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬೆಳಿಗ್ಗೆ 11 ಗಂಟೆಯಿಂದ ಧರ್ಮಸಭೆ ನಡೆಯಲಿದೆ ಎಂದು ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀ ಸೋಮೇಶ್ವರ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಸಂಸ್ಥಾಪಕ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವಿರೇಶ್, ಶಿವಯೋಗಿ ಸ್ವಾಮಿ ಕಂಬಾಳಿಮಠ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ನಾಗಭೂಷಣ್, ರಾಜಶೇಖರ್ ಇತರರು ಉಪಸ್ಥಿತರಿದ್ದರು.