ಉಪ ಖನಿಜ ಕಾನೂನಿಗೆ ತಿದ್ದುಪಡಿ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು: ಉಪಖನಿಜ ಕಾನೂನಿಗೆ ತಿದ್ದುಪಡಿ ತಂದು ನಿಯಮಗಳನ್ನು ಸರಳೀಕರಣಗೊಳಿಸಿ, ಕೈಗಾರಿಕಾ ಸ್ನೇಹಿ ನೀತಿಯನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಣ್ಣ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಏಕರೂಪದ ನಿಯಮಗಳ ಜಾರಿಗೆ ಒತ್ತು ನೀಡಿ ಈ ನೀತಿಯನ್ನು ರೂಪಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು, ಜಲ್ಲಿ ಕ್ರಷರ್ ಮಾಲೀಕರ ಬಹುದಿನಗಳ ಬೇಡಿಕೆಯಂತೆ ನನ್ನ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಹಲವು ಸುತ್ತಿನ ಸಮಾಲೋಚನೆ ಬಳಿಕ ನೀತಿಯನ್ನು ಸಿದ್ದಪಡಿಸಿದ್ದು, ನಿಯಮಾವಳಿಯಲ್ಲಿ ಸಾಕಷ್ಟು ಸರಳೀಕರಣ ಮಾಡಲಾಗಿದೆ. ಜೊತೆಗೆ, ಗಣಿ ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ನೀತಿಯು ಉದ್ಯಮ ಸ್ನೇಹಿಯಾಗಿರಲಿದೆ ಎಂದು ಹೇಳಿದರು.
ಗುತ್ತಿಗೆದಾರರು ಪಿಡಬ್ಲ್ಯುಡಿ ಇಲಾಖೆಗೆ ರಾಜಧನವನ್ನು ಪಾವತಿಸಿದರೆ, ನಂತರ ಗಣಿ ಇಲಾಖೆಗೆ ಪಾವತಿಸುವ ಅಗತ್ಯವಿರುವುದಿಲ್ಲ. ಈ ಕಾಯ್ದೆಯು ಹೈಕೋರ್ಟ್ ಆದೇಶವನ್ನು ಅನುಸರಿಸಿ, ಗಣಿಗಾರಿಕೆ ಗುತ್ತಿಗೆಗೆ ಅರ್ಜಿ ಸಲ್ಲಿಸುವವರಿಗೆ ಸಹಾಯ ಮಾಡುತ್ತದೆ. “ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಹಂತದಲ್ಲಿ ರಾಯಲ್ಟಿ ಪಾವತಿಸಲಿದ್ದು, ಕಲ್ಲು ಗಣಿಗಾರಿಕೆ ಹಂತದಲ್ಲೂ ರಾಜಧನ ಕಡ್ಡಾಯವೇ ಎಂಬಂತಹ ಹಲವು ಗೊಂದಲಗಳಿಗೆ ನೀತಿಯಲ್ಲಿ ಪರಿಹಾರ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತಿತರ ಗಣಿಗಾರಿಕೆ ಬಾಧಿತ ಮೂಲಸೌಕರ್ಯ ಅಭಿವೃದ್ಧಿಗೆ ಸಮಗ್ರ ಗಣಿ ಪರಿಸರ ಪುನಃಶ್ಚೇತನ ಯೋಜನೆಯಡಿ ಲಭ್ಯವಿರುವ ಸುಮಾರು 23,000 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಸಂಬಂಧದ ಅಧಿಕಾರವನ್ನು ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ಗೆ ಪ್ರತ್ಯೇಕವಾಗಿ ಯೋಜಿಸುವ ಮಹತ್ವದ ತೀರ್ಮಾನವನ್ನು ಸಂಪುಟ ಕೈಗೊಂಡಿತು.
ಗಣಿಗಾರಿಕೆಯಿಂದ ಸಂಗ್ರಹವಾಗಿರುವ ರಾಯಲ್ಟಿ, ಸೆಸ್, ದಂಡ ಮತ್ತಿತರ ಮೂಲದಲ್ಲಿ ಸಂಗ್ರಹವಾಗಿರುವ 23 ಸಾವಿರ ಕೋಟಿ ರೂ.ಗಳನ್ನು ಶಾಲೆ, ರಸ್ತೆ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲು ಅವಕಾಶವಿದ್ದು, ಇದರ ಮೇಲ್ವಿಚಾರಣೆಗೆ ನ್ಯಾ. ಸುದರ್ಶನ್ ರೆಡ್ಡಿ ನೇತೃತ್ವದಲ್ಲಿ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಈ ಸಂಬಂಧದ ಪ್ರಸ್ತಾವನೆಗಳಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಕೆಎಂಇಆರ್‌ಸಿಗೆ ವಹಿಸಲು ನಿರ್ಧರಿಸಲಾಯಿತು ಎಂದು ಮಾಧುಸ್ವಾಮಿ ವಿವರಿಸಿದರು.