ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಅದ್ದೂರಿ ರಥೋತ್ಸವ: ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತಾದಿಗಳು

Nayakanahatti Tipperudraswamy Grand Chariotsavam: Devotees bathed in Bhakti Sagar

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಅದ್ದೂರಿ ರಥೋತ್ಸವ

ಚಿತ್ರದುರ್ಗ : ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿದ ಈ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಲಕ್ಷಾಂತರ ಭಕ್ತರು ಭಕ್ತಿ ಭಾವ ಸಮರ್ಪಿಸಿ ಪುನೀತರಾದರು.

ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಸುಡುವ ಬಿಸಿಲು ಲೆಕ್ಕಿಸದೆ ಹಟ್ಟಿ ತಿಪ್ಪೇಶನ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಜಾತ್ರೆಗಾಗಿ ನಾಯಕನಹಟ್ಟಿಯತ್ತ ಮುಖ ಮಾಡಿದ್ದರು. ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ. ಪರಿಣಾಮ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಲಕ್ಷಾಂತರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಗುರು ತಿಪ್ಪೇರುದ್ರಸ್ವಾಮಿಯ ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿ ಭಾವ ಮೆರೆದರು.

ಶುಕ್ರವಾರ ಮಧ್ಯಾಹ್ನ 3.45ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ರಥ ಬೀದಿಯಿಂದ ಹೊರಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ  ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ‘ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ’, ‘ಕಾಯಕ ಯೋಗಿಗೆ ಜಯವಾಗಲಿ’ ಎನ್ನುವ ಜಯಘೋಷ ಕೂಗುತ್ತಾ ರಥದ ದೊಡ್ಡ ಗಾತ್ರದ ಹಗ್ಗ ಎಳೆದು ಧನ್ಯರಾದರು.

55 ಲಕ್ಷ ರೂ.ಗೆ ಮುಕ್ತಿಭಾವುಟ ಹರಾಜು: ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಭಾವುಟದ ಹರಾಜು ಪ್ರಕ್ರಿಯೆಯಲ್ಲಿ ಹಲವರು ಭಾಗಿಯಾಗಿದ್ದರು. ಹಿರಿಯೂರಿನ ಮಾಜಿ ಸಚಿವರಾದ ಡಿ.ಸುಧಾಕರ್ ಅವರು ರೂ.55 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಂಡರು. ನಂತರ ದೊಡ್ಡ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!