ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಇನ್ನಿಲ್ಲ
ಬೆಂಗಳೂರು: ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರು ಶನಿವಾರ ಬೆಳಿಗ್ಗೆ ಮೈಸೂರಿನಲ್ಲಿ ಮೃತಪಟ್ಟಿದ್ದಾರೆ.
ಚಾಮರಾಜನಗರದಿಂದ ಎರಡು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಧ್ರುವನಾರಾಯಣ್, ಕಳೆದ ಬಾರಿ (2019) ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
ಧ್ರುವನಾರಾಯಣ ಅವರಿಗೆ ಆರೋಗ್ಯದ ಸಮಸ್ಯೆ ಇರಲಿಲ್ಲ. ಹೃದಯಸಂಬಂಧಿ ಕಾಯಿಲೆ ಇರಲಿಲ್ಲ. ಎದೆ ನೋವು ಶುರುವಾಗಿದೆ ಎಂದು ಶನಿವಾರ ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ 6.40ಕ್ಕೆ ಬಂದು ಕರೆದುಕೊಂಡು ಹೋಗಿದ್ದರು. ಅವರಿಗೆ ರಕ್ತವಾಂತಿ ಆಗಿತ್ತು, ಮೈಸೂರಿನ ಡಿಆರ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಧ್ರುವನಾರಾಯಣ ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಇದ್ದರು.
ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಧ್ರುವನಾರಾಯಣ್ 1983ರಲ್ಲಿ ಕಾಂಗ್ರೆಸ್ ಪ್ರವೇಶ ಮಾಡಿದ್ದರು. ಚಾಮರಾಜನಗರದಿಂದ ಸಂಸದರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ಕೊಳ್ಳೇಗಾಲ ಮತ್ತು ಸಂತೇಮರಹಳ್ಳಿ ಕ್ಷೇತ್ರಗಳಿಂದ ಎರಡು ಬಾರಿ ಶಾಸಕರಾಗಿದ್ದರು. ಈ ಬಾರಿ ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು.