ಎಲೆಕ್ಷನ್ಗೆ ನೀವಾದರೂ ನಿಲ್ಲಿ, ಇಲ್ಲವೇ ಸ್ಥಳೀಯರನ್ನು ಸೂಚಿಸಿ ರವೀಂದ್ರನಾಥ್ಗೆ ಬಿಜೆಪಿ ಕಾರ್ಯಕರ್ತರ ಮನವಿ

ದಾವಣಗೆರೆ: ನೀವೇ ಚುನಾವಣೆಗೆ ನಿಲ್ಲಿ. ಇಲ್ಲ ಸ್ಥಳೀಯರಾಗಿರುವ ಯಾರನ್ನೇ ಬೇಕಾದರೂ ಸೂಚನೆ ಮಾಡಿ. ಗ್ರಾಮ ಪಂಚಾಯಿಸಿ ಸದಸ್ಯನಾದರೂ ಪರವಾಗಿಲ್ಲ. ಯಾರನ್ನು ಸೂಚಿಸುತ್ತೀರೋ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಹೊರಗಿನವರಿಗೆ ಟಿಕೆಟ್ ನೀಡಿದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಅದು ಬಿಜೆಪಿಗೆ ಮುಳುವಾಗುತ್ತದೆ ಎಂದು ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಎ. ರವೀಂದ್ರನಾಥ್ ಮನವಿ ಮಾಡಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲೆಯ ಹೊರಗಿನ ಹೆಸರು ಕೇಳಿ ಬರುತ್ತಿದೆ. ಹೊರಗಿನವರಿಗೆ ಟಿಕೆಟ್ ನೀಡಬಾರದು. ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಕಾರ್ಯಕರ್ತರು ಭಾನುವಾರ ರವೀಂದ್ರನಾಥ್ ಅವರ ನಿವಾಸಕ್ಕೆ ತೆರಳಿ ಆಗ್ರಹಿಸಿದ್ದಾರೆ.
ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಿಸುವಾಗ ಇಲ್ಲದ ಹೆಸರು ಹೇಗೆ ಸೇರಿಕೊಂಡಿತು? ಎಂ.ಪಿ.ಯ ಮಗ ಎಂಬ ಕಾರಣಕ್ಕೆ ಈಗ ಹೆಸರು ಕೇಳಿ ಬರುತ್ತಿದೆ. ವಂಶಪಾರಂಪರ್ಯವಾಗಿ ಅವರೇ ರಾಜಕಾರಣ ಮಾಡುತ್ತಾ ಹೋಗುವುದಾದರೆ ಉಳಿದವರು ಎಲ್ಲಿ ಹೋಗಬೇಕು? ಕಾಂಗ್ರೆಸ್ಗೂ ಬಿಜೆಪಿಗೂ ಆಗ ಯಾವ ವ್ಯತ್ಯಾಸ ಉಳಿಯುತ್ತದೆ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಗಮನಕ್ಕೆ ತರುತ್ತೇನೆ. ವಂಶಪಾರಂಪರ್ಯವನ್ನು ನಾನೂ ಬೆಂಬಲಿಸುವುದಿಲ್ಲ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಎಸ್.ಎ. ರವೀಂದ್ರನಾಥ್ ತಿಳಿಸಿದರು.