ರಾಜ್ಯ ವಿಧಾನಸಭಾ ಚುನಾವಣೆ 2023: ‘ರಾಜ್ಯದ ಜನತೆಯಿಂದಲೇ, ಜನತೆಗಾಗಿ, ಜನತೆಗೋಸ್ಕರ’ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಜೆಪಿ ನಡ್ಡಾ ಅವರು, ರಾಜ್ಯದ 224 ಕ್ಷೇತ್ರದ ಜನತೆ, ತಜ್ಞರ ಅಭಿಪ್ರಾಯ ಪಡೆದು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಬಿಜೆಪಿಯದ್ದು ಜನಪರ ಪ್ರಣಾಳಿಕೆಯಾಗಿದೆ, ಜನರಿಗೆ ಏನೆಲ್ಲಾ ಒಳ್ಳೆಯದನ್ನು ಮಾಡಲು ಸಾಧ್ಯವಿದೆ, ಅದನ್ನು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಚಿವ ಸುಧಾಕರ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಭಾಗವಹಿಸಿದ್ದರು.