ಯಾರು ಯಾವ ಹೆಸರಿನಲ್ಲಿ ಪ್ರಮಾಣ ವಚನ? ಬರಿಗಣ್ಣಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಿವಶಂಕರಪ್ಪ
ಬೆಂಗಳೂರು: ನೂತನ ಶಾಸಕರುಗಳ ಪ್ರಮಾಣ ವಚನ ಕಾರ್ಯಕ್ರಮ ಇಂದು ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಗವಂತ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ಕಾಂಗ್ರೆಸ್‌ನ ಶಿವಾನಂದ ಪಾಟೀಲ ಅಣ್ಣ ಬಸವಣ್ಣ ಹೆಸರಲ್ಲಿ, ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವ ಮತ್ತು ಗೋಮಾತೆ ಹೆಸರಲ್ಲಿ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಭಗವಂತನ ಹೆಸರಲ್ಲಿ ಆರಾಧ್ಯದೈವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.
ಸಂವಿಧಾನ ಮತ್ತು ದೇವರ ಹೆಸರಲ್ಲಿ ಮಾತ್ರ ಪ್ರಮಾಣ ಸ್ವೀಕರಿಸಬಹುದು. ಇತರ ಯಾವುದೇ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ ಕಾನೂನು ಬದ್ಧ ಆಗುವುದಿಲ್ಲ ಎಂದು ಹಂಗಾಮಿ ಸಭಾಧ್ಯಕ್ಷ ಆರ್.ವಿ.ದೇಶಪಾಂಡೆ ಸೂಚನೆ ನೀಡಿದ್ದರೂ, ಕೆಲವು ಶಾಸಕರು ಅದನ್ನು ಪಾಲಿಸಲಿಲ್ಲ.
ಬಿಜೆಪಿ ಭಾಗೀರಥಿ ಮುರುಳ್ಯ ತಮ್ಮ ಕುಲದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವಾಗ, ಬಸವರಾಜ ರಾಯರೆಡ್ಡಿ, ದೇವರುಗಳ ಹೆಸರು ಹೇಳುವುದು ಸರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಿ ಎಂದರು. ಅದಕ್ಕೆ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪಿಸಿದರು.
ಗಾಲಿ ಜನಾರ್ದನ ರೆಡ್ಡಿ, ಗಂಗಾವತಿ ಜನತೆ, ಆಂಜನಾದ್ರಿ, ಹನುಮಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಕಾಂಗ್ರೆಸ್ ಖಲೀಜ್ ಫಾತೀಮಾ ಅಲ್ಲಾನ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ಓದಿದ ಮೇಲೆ ಎಲ್ಲಿ ಸಹಿ ಹಾಕಬೇಕು ಎಂದರು. ಸಭಾಧ್ಯಕ್ಷರ ಪೀಠವನ್ನು ಬಳಸಿ ಬಂದು ಸಹಿ ಪುಸ್ತಕದಲ್ಲಿ ಸಹಿ ಹಾಕಿ ಎಂದು ಕಾರ್ಯದರ್ಶಿ ಹೇಳಿದರು. ಪೀಠ ಬಳಸಿ ಬರುವಾಗ ಅಲ್ಲಿ ನಿಂತಿದ್ದ ಮಾರ್ಷಲ್ ಬಳಿ ಎಲ್ಲಿ ಸಹಿ ಎಲ್ಲಿ ಹಾಕಬೇಕು ಎಂದು ಮತ್ತೆ ಪ್ರಶ್ನಿಸಿದರು.
ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ನವಲಗುಂದ ಶಾಸಕ ಕೋನರೆಡ್ಡಿ ಅವರು ಹಸಿರು ಶಾಲು ತೊಟ್ಟು ವಿಧಾನಸಭೆಗೆ ಆಗಮಿಸಿ ಗಮನ ಸೆಳೆದರು. ಖಾನಾಪುರ ಶಾಸಕ ವಿಠಲ್ ಹಲಗೇಕರ್ ಕೇಸರಿ ಪೇಟ ತೊಟ್ಟು ಗಮನ ಸೆಳೆದರು. ಇನ್ನು ವಿಜಯಾನಂದ ಕಾಶಪ್ಪನವರ್ ಕೇಸರಿ, ಬಿಳಿ, ಹಸಿರು ಶಾಲು ತೊಟ್ಟು ಬಂದು ಗಮನ ಸೆಳೆದರು.