ನನ್ನ ಮೇಷ್ಟ್ರು ಇರದೇ ಇದ್ದರೇ, ಲಾಠಿ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ
ದಾವಣಗೆರೆ : ಎರಡಕ್ಷರಂ ಕಲಿಸಿದಾತಂ ಗುರು. ಅಕ್ಷರ ಕಲಿಸಿದತಾನನ್ನು ಗುರು ಎನ್ನುದಾದರೆ, ಬದುಕು ರೂಪಿಸಿದವರನ್ನು ಮಹಾಗುರು ಎಂದರೆ ತಪ್ಪಾಗಲಾರದು. ಅಂಥಹ ಮಹಾಗುರುವಿಗೆ ಗುರುಪೌರ್ಣಿಮೆಯ ಈ ಸುದಿನದಂದು ಡಿಸಿಆರ್‌ಬಿ ಡಿವೈಎಸ್ಪಿ ಬಿ.ಎಸ್.ಬಸವರಾಜ್ ನಮನ ಸಲ್ಲಿಸಿದ್ದು, ನನ್ನ ಗುರುಗಳು ಇಲ್ಲದೇ ಹೋಗದೇ ಇದ್ದರೇ ನಾನು ಲಾಠಿ ಹಿಡಿಯಲು ಆಗುತ್ತಿರಲಿಲ್ಲ.
ಇದು….ದಾವಣಗೆರೆ ನಗರದ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಹೇಳುವ ಮಾತು. ಹೌದು…ಬಿ.ಎಸ್.ಬಸವರಾಜ್ ಜಿಲ್ಲಾ ಅಪರಾಧ ತಡೆ ವಿಭಾಗದ ಉಪಾಧೀಕ್ಷಕರಾಗಿದ್ದುಘಿ, ತಾವು ಈ ಸ್ಥಾನಕ್ಕೆ ಏರಿ ಏನೆಲ್ಲ ಸಾಧನೆ ಮಾಡಲು ಪ್ರೇರಣೆ ನೀಡಿದ ಗುರುವನ್ನು ಅವರು ಇಂದು ನೆನಪು ಮಾಡಿಕೊಂಡರು.
ಬಸವರಾಜ್ ಮೂಲತ: ಬಾದಾಮಿಯರು. ತಂದೆ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣದಿಂದ ವರ್ಗಾವಣೆ ಸಹಜವಾದರೂ ದೇವರೆ ಪ್ರೇರಣೆ ಏನೋ ಎನ್ನುವಂತೆ ಬೆಂಗಳೂರು ಸೇರಿದಂತೆ ಕೆಲ ಕಡೆಗಲ್ಲಿ ತಂದೆಯ ವರ್ಗಾವಣೆಯ ಜೊತೆಗ ಸುತ್ತಿ ಕೊನೆಗೂ ಹುಟ್ಟೂರು ಬಾದಾಮಿಗೆ ಮರಳುವಂತಾಯಿತು ಎನ್ನುತ್ತಾರೆ ಬಸವರಾಜ್.
ಬಾದಾಮಿಯ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ‘ಮೇಟಿ’ ಹೆಸರಿನ ಶಿಕ್ಷಕರಿದ್ದರು. ಶಿಸ್ತಿನ ಸಿಪಾಯಿ ಅವರು, ಅತ್ಯುತ್ತಮ ಶಿಕ್ಷಕರು,ತಪ್ಪು ಮಾಡಿದರೆ ಮಾತ್ರ ಅಪ್ಪ ಅಮ್ಮ ಎಷ್ಟೇ ಪ್ರಭಾವಿಗಳಿದ್ದರೂ ದಂಡಿಸುತ್ತಿದುದು ಗ್ಯಾರಂಟಿ. ನಾನು ಗಣಿತದಲ್ಲಿ ಬುದ್ದಿವಂತನಿದ್ದೆ. ಮೇಟಿ ಅವರು ನಮ್ಮ ತಂದೆಯ ಬಳಿ ನಿಮ್ಮ ಮಗ ಜಾಣನಿದ್ದಾನೆ. ಸೈನಿಕ ಶಾಲೆಗೆ ಸೇರುವಂತೆ ತರಬೇತಿ ನೀಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುಂಜಾನೆ 5ಗಂಟೆಗೆ ಎದ್ದು 9.30 ರ ವರೆಗೆ ಮನೆ ಪಾಠ ಮಾಡುತ್ತಿದ್ದರು. ನಂತರ ನಾವು ಶಾಲೆಗೆ ಹೊಗಿ ಮೇಟಿ ಅವರಿಂದ ಮತ್ತೆ ಪಾಠ ಕೇಳುತ್ತಿದ್ದೆವು.
ನಂತರ ಸಂಜೆ 5.15 ರಿಂದ ರಾತ್ರಿ 10 ರ ವೆರೆಗೆ ಮೇಟಿ ಅವರ ಮನೆಯಲ್ಲಿ ಇರಬೇಕಿತ್ತು. ಈ ವೇಳೆ ರಾಮಾಯಣ, ಮಹಾಭಾರತ, ಪಂಚತಂತ್ರದ ನೀತಿ ಕತೆಗಳು, ಗದ್ಯ,ಪದ್ಯ, ಹೀಗೆ ಬದುಕಿನ ಪಾಠಗಳನ್ನು ತಿಳಿಸಿಕೊಟ್ಟರು. ಹೀಗೆ ಕಠಿಣ ಮತ್ತು ನಿರಂತರ ಶ್ರಮದಿಂದಾಗಿ ಸೈನಿಕ ಶಾಲೆ ಪ್ರವೇಶ ಪರೀಕ್ಷೆ ಬರೆದ 11 ಜನರಲ್ಲಿ 7 ಜನ ಉತ್ತೀರ್ಣರಾದೆವು ಅದರಲ್ಲಿ ನಾನು ಸೇರಿ ಇಬ್ಬರಿಗೆ ಮಾತ್ರ ಸೈನಿಕ ಶಾಲೆಗೆ ಪ್ರವೇಶ ದೊರೆಯಿತು. ಅಲ್ಲಿಂದ ನ್ನನ ವಿದ್ಯಾರ್ಥಿ ಜೀವನದ ದಿಕ್ಕು ಬದಲಾಯಿತು. ಇತ್ತೀಚೆಗೆ ನನ್ನ ಮೆಚ್ಚಿನ ಮೇಷ್ಟು ಮೇಟಿ ಅವರು ನಿಧನರಾದರು. ಅಂಥಹ ಮಹಾನ್ ಗುರುಗಳ ಮಾರ್ಗದರ್ಶನ ಹಾಗೂ ಸಹಕಾರರಿಂದ ನಾನು ಇಂದು ಈ ವೃತ್ತಿಗೆ ಬರಲು ಮೂಲ ಪ್ರೇರಣೆಯಾಗಿದೆ ಎಂದು ಬದುಕು ಕೊಟ್ಟ ಮಹಾನ್ ಗುರುವನ್ನು ಬಸವರಾಜ್ ನೆನಪು ಮಾಡಿಕೊಂಡರು.
ಇನು ಜನ್ಮ ನೀಡಿದ ತಂದೆ. ತಾಯಿ ಜೀವನದ ಪ್ರತಿಯೊಂದು ಹಂತದಲ್ಲೂ ಮೂಲ ಪ್ರೇರಣೆಯಾಗಿದ್ದಾರೆ. ಸೈನ್ಯಕ್ಕೆ ಸೇರಿದರೆ ನಿರ್ವಹಿಸಬೇಕಾದ ಸೇವೆಗಳು, ಪೊಲೀಸ್ ಇಲಾಖೆಗೆ ಸೇರಿದರೆ ಮಾಡಬೇಕಾದ ಕರ್ತವ್ಯಗಳು, ಸಾರ್ವಜನಿಕ ಸೇವೆಗೆ ಸೇರಿದರೆ ಹೇಗೆ ? ಹುದ್ದೆಯಾವುದೇ ಇದ್ದರೂ ಅದಕ್ಕೆ ಚ್ಯುತಿ ಬಾರದಂತೆ ಸೇವೆ ಮಾಡಬೇಕೆಂದು ಹೇಳಿಕೊಟ್ಟ ಅಪ್ಪ, ಅಮ್ಮರನ್ನು ಸದಾ ಸ್ಮರಿಸಿಕೊಳ್ಳುತ್ತೇನೆ ಎನ್ನುತ್ತಾರೆ ಡಿವೈಎಸ್ಪಿ ಬಿ.ಎಸ್.ಬಸವರಾಜ್. ಇದೇ ಅಲ್ಲವೇ ಓರ್ವ ಅತ್ಯುತ್ತಮ ಶಿಕ್ಷಕರಿಗೆ ಓರ್ವ ಅತ್ಯುತ್ತಮ ವಿದ್ಯಾರ್ಥಿ ಸಲ್ಲಿಸಬಹುದಾದ ನಿಜವಾದ ಗೌರವ.