ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ವಿವಿಧ ಸಂಘಟನೆಗಳು, ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರಿಗೆ ವಾಗ್ದಾನ ನೀಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯ, “ದಲಿತರ ಹಿತಾಸಕ್ತಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಪುನರುಚ್ಚರಿಸಲಾಗಿದೆ. ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಈ ಸಭೆ ಕರೆಯಲಾಗಿದ್ದು, ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ” ಎಂದು ವಿವರಿಸಿದರು.
ಅಲ್ಲದೆ, ಪುನರಾವರ್ತಿತ ದಾವೆಗಳು ಇರಬಾರದು ಮತ್ತು ಪಿಟಿಸಿಎಲ್ ಕಾಯ್ದೆಯ ಉದ್ದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಭೂಮಿ ಕಳೆದುಕೊಂಡವರು ನ್ಯಾಯಾಲಯದಲ್ಲಿ ಸೋಲು ಅನುಭವಿಸಬಾರದು. ಆದ್ದರಿಂದ ದಲಿತ ಮುಖಂಡರು ಮತ್ತು ವಕೀಲರ ಅಭಿಪ್ರಾಯ ಕೇಳಲಾಗಿದೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆಯಲಾಗುವುದು” ಎಂದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, “ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ನೀಡಿರುವ ಮಾಹಿತಿ ಮತ್ತು ಸಲಹೆಗಳು ಅರ್ಥಪೂರ್ಣವಾಗಿವೆ. ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವೇಳೆ ಈ ಸಲಹೆಗಳನ್ನು ಪರಿಗಣಿಸಲಾಗುವುದು. ಬಜೆಟ್ ಮೇಲಿನ ಅಧಿವೇಶನದ ಸಂದರ್ಭದಲ್ಲೂ ನಾವು ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಸಂಬಂಧ ಮುಖಂಡರ ಸಭೆಯನ್ನು ಕರೆದಿದ್ದೇವೆ ಎಂದರೆ ದಲಿತರ ಹಕ್ಕುಗಳನ್ನು ಕಾಪಾಡುವ ವಿಚಾರದಲ್ಲಿ ನಮ್ಮಸರ್ಕಾರದ ಬದ್ಧತೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ, ಡಾ.ಜಿ.ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್. ರಾಜಣ್ಣ, ಆರ್.ಬಿ.ತಿಮ್ಮಾಪುರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಪಿ.ಮಣಿವಣ್ಣನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ದಲಿತ ಸಮುದಾಯದ ವಕೀಲರು ಸಭೆಯಲ್ಲಿ ಉಪಸ್ಥಿತರಿದ್ದರು.