ಆಗಸ್ಟ್ ಮೊದಲ ವಾರದಲ್ಲಿ ಭದ್ರಾ ನದಿಗೆ ನೀರು ಬಿಡಲು ಕ್ಷಣಗಣನೆ : ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ: ದೇವರ ಕೃಪೆಯಿಂದ ಸರಿಯಾದ ಸಮಯದಲ್ಲಿ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಬೀರಿದ್ದು, ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಸಭೆಯಲ್ಲಿ ಭದ್ರಾ ಜಲಾಶಯನಿಂದ ನೀರು ಬಿಡುಗಡೆ ಮಾಡುವ ದಿನಾಂಕ ನಿಗದಿಪಡಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಭದ್ರಾ ಜಲಾಶಯದಲ್ಲಿ ಪ್ರಸ್ತುತ ೧೬೧.೬ ಅಡಿ ನೀರು ಇದ್ದು, ಶೀಘ್ರದಲ್ಲಿಯೇ ನೀರಾವರಿ ಸಲಹಾ ಸಮಿತಿ ರಚಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಮುಂಗಾರು ಆರಂಭದಲ್ಲಿ ಮಳೆ ವಿಳಂಬವಾಯಿತಾದರೂ ನಂತರ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದು ಜಲಾಶಯಕ್ಕೆ ಉತ್ತಮ ನೀರು ಹರಿದು ಬಂದಿದೆ. ವಾಡಿಕೆಯಂತೆ ೧೬೩ ಅಡಿ ನೀರು ಜಲಾಶಯದಲ್ಲಿದ್ದರೆ ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ.
ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದ್ದು, ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ಕರೆದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.