ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ
ಬೆಂಗಳೂರು: ಸತತ 15 ವರ್ಷದಿಂದ ನೇಮಕಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಈ ಸರ್ಕಾರದ ಅವಧಿಯಲ್ಲಿ ಗುಡ್ ನ್ಯೂಸ್ ಸಿಗಲಿದೆಯೇ? ಹೌದು ಎನ್ನುತ್ತದೆ ಶಿಕ್ಷಣ ಸಚಿವರ ಉತ್ತರ! ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪ್ರಸ್ತುತ ಖಾಲಿ ಇರುವ ಪೈಕಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ಶಿಕ್ಷಣ ಸಚಿವರು ಈ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಸುಮಾರು 17 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಯವರು ಆರೋಪ ಮಾಡುತ್ತಿದ್ದಾರೆ. ಇದು ನಿಜವೇ ಎಂದು ಎಸ್.ವಿ. ಸಂಕನೂರ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ 2008ನೇ ಸಾಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ 2014-15ನೇ ಸಾಲಿಗೆ 148 ಹುದ್ದೆಗಳಿಗೆ ನೇಮಿಸಿಕೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 41913 ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ಮಂಜೂರಾದ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 6772 ಆಗಿದೆ. ಆದರೆ, ಕಾರ್ಯನಿರತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 4127 ಆಗಿದೆ. ಹೀಗಾಗಿ ಇದರಲ್ಲಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರೌಢಶಾಲೆಯಲ್ಲಿ ನೇಮಕಕ್ಕೆ ಸಚಿವರು ಹೇಳಿದ್ದೇನು?
ಇನ್ನು ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಗಳು ಇವೆ. ಇದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಮಂಜೂರಾದ ಹುದ್ದೆ 5210 ಆಗಿದೆ. ರಾಜ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1 ಶಿಕ್ಷಕರ ಕಾರ್ಯನಿರತ ಹುದ್ದೆಗಳ ಸಂಖ್ಯೆ 3589 ಆಗಿದೆ.
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಸೇರಿ ಒಟ್ಟು 2500 ಶಿಕ್ಷಕರುಗಳ ಹುದ್ದೆಗಳನ್ನು 15000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿರುತ್ತದೆ.
ಆದರೆ, ಸದರಿ 15000 ಹುದ್ದೆಗಳಲ್ಲಿ ಪ್ರೌಢಶಾಲಾ ಶಿಕ್ಷಕರುಗಳ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಪ್ರಯುಕ್ತ ಪ್ರಸ್ತುತ ಸಾಲಿನಲ್ಲಿ 200 ದೈಹಿಕ ಶಿಕ್ಷಕರ ಹುದ್ದೆಯು ಸೇರಿದ್ದು ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿಯಿಂದ ತೆರವಾಗಿರುವ ದೈಹಿಕ ಶಿಕ್ಷಣ ಉಪನ್ಯಾಸಕರನ್ನು ಮಾಡಿಕೊಳ್ಳದಂತೆ ನೇಮಕಾತಿ ಆರ್ಥಿಕ ಇಲಾಖೆಯಿಂದ ಟಿಪ್ಪಣಿ ರೂಪದಲ್ಲಿ ಆದೇಶ ಬಂದಿದೆಯೇ? ಹಾಗಿದ್ದಲ್ಲಿ, ಈ ಕುರಿತು ಸರ್ಕಾರ ಕೈಗೊಂಡ ಕ್ರಮವೇನು? ಎಂದು ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಶ್ನೆ ಮಾಡಿದ್ದರು.