ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

Masala Tea: Is It Good for You?

Masala Tea: Is It Good for You?

ಬಹಳಷ್ಟು ಮಂದಿಗೆ ಎದ್ದ ಕೂಡಲೇ, ಕೈಯಲ್ಲೊಂದು ಕಪ್‌ ಚಹಾ ಹಿಡಿಯದಿದ್ದರೆ, ಬೆಳಗು ಬೆಳಗೆನಿಸುವುದೇ ಇಲ್ಲ. ಬಿಸಿ ಬಿಸಿಯಾದ ಚಹಾ ಹೀರುತ್ತಾ ಒಂದ್ಹತ್ತು ನಿಮಿಷವಾದರೂ ಕೂತರೆ ಏನೋ ಒಂದು ನೆಮ್ಮದಿ. ಅದು ಚಳಿಗಾಲವೇ ಇರಲಿ, ಮಳೆಗಾಲವೇ ಇರಲಿ, ಸುಡು ಸುಡು ಬೇಸಿಗೆಯೇ ಇರಲಿ, ಈ ಪರಿಪಾಠ ಬಹಳಷ್ಟು ಮಂದಿಗೆ ಅಭ್ಯಾಸವಾಗಿಬಿಟ್ಟಿದೆ. ಆರೋಗ್ಯದ ದೃಷ್ಠಿಯಿಂದ ಬೆಳಗ್ಗೆ ಚಹಾ ಕುಡಿಯುವುದನ್ನು ಬಿಡಿ ಎಂಬ ಸಲಹೆಗಳನ್ನು ಕೇಳಿದರೂ ಅನುಸರಿಸುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ. ಒಂದೆರಡು ದಿನ ಬಿಟ್ಟು ಮತ್ತೆ, ಯಥಾಪ್ರಕಾರ ಮನಸ್ಸು ಚಹಾ ಬಯಸುತ್ತದೆ.

ಚಹಾದಲ್ಲೂ, ಒಬ್ಬೊಬ್ಬರು ಒಂದೊಂದು ಬಗೆಯ ಚಹಾ ಇಷ್ಟಪಡುವುದೂ ಇದೆ. ಒಬ್ಬೊಬ್ಬರದು ಒಂದೊಂದು ಆದ್ಯತೆ. ಕೆಲವರಿಗೆ ಸಾದಾ ಚಹಾ, ಬ್ಲ್ಯಾಕ್‌ ಚಹಾ, ಗ್ರೀನ್‌ ಚಹಾ ಹೀಗೆ ಬಗೆಬಗೆಯ ಚಹಾಗಳಲ್ಲಿ ಒಂದು ಅಭ್ಯಾಸವಾದರೆ, ಇನ್ನೂ ಕೆಲವರಿಗೆ ಬೆಳಗ್ಗೆ ಶುಂಠಿ ಸೇರಿದಂತೆ ತುಳಸಿ, ಚೆಕ್ಕೆ, ಏಲಕ್ಕಿ, ಕರಿಮೆಣಸು ಹೀಗೆ ಹಲವು ಬಗೆಯ ಮಸಾಲೆಗಳನ್ನು ಹಾಕಿದ ಮಸಾಲೆ ಚಹಾ ಕುಡಿಯುವ ಅಭ್ಯಾಸ.

ಮುಖ್ಯವಾಗಿ ಚಳಿಗಾಲ ಬಂದೊಡನೆ ಈ ಮಸಾಲೆ ಚಹಾದ ಬಯಕೆ ಹೆಚ್ಚು. ಚಳಿಗಾಲಕ್ಕೆ ಈ ಎಲ್ಲ ಮಸಾಲೆಗಳು ಒಳ್ಳೆಯದು ಎಂದು ನಾವೂ ಆಗಾಗಬೆಚ್ಚಗೆ ಈ ಮಸಾಲೆ ಚಹಾವನ್ನು ಹೊಟ್ಟೆಗಿಳಿಸುತ್ತಲೇ ಇರುತ್ತೇವೆ. ಆದರೆ, ಸಾಧಕ ಬಾಧಕಗಳ ಬಗ್ಗೆ ಕೊಂಚವಾದರೂ ಯೋಚಿಸುತ್ತೇವಾ?

ಹೌದು. ಯಾವುದೂ ಅತಿಯಾಗಬಾರದು ಎಂದು ನಮ್ಮ ಹಿರಿಯರೇ ಹೇಳಿ ಹೋಗಿದ್ದಾರೆ. ಹಾಗೆಯೇ ಚಹಾದ ಮಸಾಲೆಯೂ ಅತಿಯಾಗಬಾರದು. ಈ ಮಸಾಲೆಗಳೆಲ್ಲ ಚಳಿಗಾಲಕ್ಕೆ ಒಳ್ಳೆಯದೇ ಆಗಿರುವುದರಿಂದ ಚಿಂತೆಯೇ ಇಲ್ಲ ಎಂದು ಅಂದುಕೊಂಡರೆ ತಪ್ಪಾದೀತು. ಯಾಕೆಂದರೆ, ಚಿಂತೆ ಮಾಡುವ ಪ್ರಸಂಗವೂ ಬಂದೀತು. ಯಾಕೆಂದರೆ, ಮಸಾಲೆ ಅಧಿಕವಾದರೆ, ತೊಂದರೆಯೂ ತಪ್ಪಿದ್ದಲ್ಲ. ಹಾಗಾದರೆ ಬನ್ನಿ, ಮಸಾಲೆಗಳ ಅತಿಯಾದ ಸೇವನೆಯಿಂದ ಯಾವೆಲ್ಲ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಂಬುದನ್ನು ನೋಡೋಣ.

ಮಿತವಾಗಿ ಸೇವಿಸಿ

ಮಸಾಲೆಗಳ ಸೇವನೆ ಚಹಾದ ಮೂಲಕ ಅಥವಾ ಇನ್ನಾವುದೇ ಆಹಾರ ಪದಾರ್ಥಗಳ ಮೂಲಕ ಅತಿಯಾದರೆ, ಕೆಲವೊಮ್ಮೆ ಜೀರ್ಣಕ್ರಿಯೆಯಲ್ಲೂ ತೊಂದರೆಗಳಾಗಬಹುದು. ಹೊಟ್ಟೆನೋವು, ಮಲಬದ್ಧತೆ, ಅಜೀರ್ಣದಂತಹ ತೊಂದರೆಗಳೂ ಕಾಡಬಹುದು. ಹಾಗಾಗಿ ಮಸಾಲೆಗಳಿಂದ ಲಾಭ ಪಡೆಯಬೇಕೆಂದರೆ, ಮಿತವಾಗಿ ಸೇವಿಸಬೇಕು.

ಸಮಸ್ಯೆಗೂ ಕಾರಣವಾಗಬಹುದು

ಮಸಾಲೆ ಚಹಾದಲ್ಲಿ ಸಾಕಷ್ಟು ಕೆಫೀನ್‌ ಇರುವುದರಿಂದ ಇದು ಅಧಿಕವಾದರೆ, ಒತ್ತಡ ಹಾಗೂ ದುಗುಡ, ಉದ್ವೇಗದಂತಹ ಸಮಸ್ಯೆಗಳೂ ಬರಬಹುದು. ಹಾಗಾಗಿ ಮಸಾಲೆ ಚಹಾವಿರಲಿ, ಇನ್ನಾವುದೇ ಚಹಾವಿರಲಿ, ಅತಿಯಾಗಿ ಕುಡಿಯಬಾರದು.

ಅಲರ್ಜಿ ತರಬಹುದು

ಕೆಲವು ಮಂದಿಗೆ ಕೆಲವು ಮಸಾಲೆಗಳು ಅಲರ್ಜಿಯನ್ನೂ ತರಬಹುದು. ಹಾಗಾಗ ಅಲರ್ಜಿ ಸಮಸ್ಯೆಯ ಮಂದಿ, ಇಂತಹ ಮಸಾಲೆಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.

ರಕ್ತದೊತ್ತಡ ಏರುಪೇರಾಗಬಹುದು

ಮಸಾಲೆಗಳ ಅತಿಯಾದ ಸೇವನೆಯಿಂದ ರಕ್ತದೊತ್ತಡದಲ್ಲೂ ಏರುಪೇರಾಗಬಹುದು. ಹಾಗಾಗಿ ಅಧಿಕ ರಕ್ತದೊತ್ತಡ ಇರುವ ಮಂದಿ ಹೆಚ್ಚು ಮಸಾಲೆಗಳ ಸೇವನೆಯಿಂದ ದೂರ ಉಳಿಯುವುದು ಒಳ್ಳೆಯದು.

ಎದೆ ಉರಿ ಹೆಚ್ಚಬಹುದು

ಇನ್ನೂ ಕೆಲವರಿಗೆ ಮಸಾಲೆ ಚಹಾ ಹೆಚ್ಚು ಕುಡಿಯುವುದರಿಂದ ಎದೆಯುರಿಯೂ ಬರಬಹುದು.

ತುರಿಕೆಗೆ ಕಾರಣವಾಗಬಹುದು

ಕೆಲವು ಮಂದಿಗೆ ಮಸಾಲೆ ಚಹಾದಿಂದ ಅಂದರೆ ಅದರಲ್ಲಿ ಹಾಕಿರುವ ಕರಿ ಮೆಣಸಿನಿಂದಾಗಿ ತುರಿಕೆಯಂತಹ ಅಲರ್ಜಿಗಳೂ ಉಂಟು ಮಾಡುತ್ತವೆ. ಮುಖ್ಯವಾಗಿ ಗರ್ಭಿಣಿಯರಿಗೆ ಇಂಥ ಅಲರ್ಜಿಗಳಾಗುವ ಸಂಭವ ಹೆಚ್ಚು. ಹಾಗಾಗಿ ಗರ್ಭಿಣಿಯರು ಅತಿಯಾದ ಮಸಾಲೆಗಳಿಂದ ದೂರವಿರುವುದು ಒಳ್ಳೆಯದು.

ಹಾಗಾಗಿ, ಯಾವುದೇ ಕಾಲವಿರಲಿ, ಚಹಾವನ್ನು ಹಿತಮಿತವಾಗಿ ಕುಡಿದರೆ, ಇಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಇಲ್ಲವಾದರೆ, ತೊಂದರೆ ಖಂಡಿತ.

Leave a Reply

Your email address will not be published. Required fields are marked *

error: Content is protected !!