ಭದ್ರಾ ಬಲದಂಡೆ ನಾಲೆಗೆ ಫೆಬ್ರವರಿ 28 ರ ವರೆಗೆ ನೀರು, ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಬಿಗಿಕ್ರಮ, ಉಸ್ತುವಾರಿ ತಂಡಗಳ ರಚನೆ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ
ದಾವಣಗೆರೆ: ಈ ವರ್ಷ ತೀವ್ರ ಬರಗಾಲದಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಬೇಸಿಗೆ ಹಂಗಾಮಿನಲ್ಲಿ ಅರೆ ನೀರಾವರಿ ಬೆಳೆಗಳಿಗೆ ನೀರು ಹರಿಸಲು ತೀರ್ಮಾನಿಸಿ ಬಲದಂಡೆ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದ್ದು ಈ ನೀರು ಕೊನೆ ಹಂತದ ರೈತರಿಗೂ ತಲುಪಬೇಕೆಂದು ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಲದಂಡೆ ನಾಲೆಗೆ ಈಗಾಗಲೇ ಫೆ.16 ರಿಂದಲೇ ನೀರು ಬಿಡಲಾಗಿದ್ದು ಫೆ.28 ರ ವರೆಗೆ ನೀರು ಹರಿಸಲಾಗುತ್ತದೆ. ಒಟ್ಟು 13 ದಿನಗಳವರೆಗೆ ಕಾಲುವೆಯಲ್ಲಿ ನೀರು ಹರಿಯಲಿದ್ದು ನಂತರ ನಿಲ್ಲಿಸಲಾಗುತ್ತದೆ. ಈ ವೇಳೆ ಕೊನೆಯ ಹಂತದ ರೈತರಿಗೂ ನೀರು ತಲುಪಿಸಬೇಕಾಗಿದೆ. ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ಅರೆ ನೀರಾವರಿ ಬೆಳೆ ಬೆಳೆಯಲು ಸಲಹೆ ನೀಡಲಾಗಿದೆ. ಇರುವ ತೋಟಗಳನ್ನು ಉಳಿಸಿಕೊಳ್ಳಲು ಮತ್ತು ಕುಡಿಯುವ ನೀರಿನ ಕೊಳವೆಬಾವಿಗಳ ಅಂತರ್ಜಲ ಕಡಿಮೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದರು.
ಬಲದಂಡೆಗೆ ಕೆಲವು ರೈತರು ಅನಧಿಕೃತವಾಗಿ ಪಂಪ್ ಅಳವಡಿಕೆ ಮಾಡಿಕೊಂಡು ನೀರೆತ್ತಲಾಗುತ್ತಿದೆ. ಇದರಿಂದ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ನೀರಾವರಿ ಇಲಾಖೆಗೆ ಸೇರಿರುವ ಜಾಗದಲ್ಲಿ ಅಂದರೆ ಭೂಸ್ವಾಧೀನವಾದ ಜಾಗದಲ್ಲಿಯೇ ಕೊಳವೆಬಾವಿ ಕೊರೆಯಿಸಿ ಟಿ.ಸಿ.ಗಳನ್ನು ಅಳವಡಿಸಿ ನೀರೆತ್ತಲಾಗುತ್ತಿದೆ. ನಿಯಮಾನುಸಾರ ಕ್ರಮ ಕೈಗೊಂಡು ಅನಧಿಕೃತವಾಗಿದ್ದಲ್ಲಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ. ಇದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳನ್ನೊಳಗೊಂಡು ದಾವಣಗೆರೆ, ಹರಿಹರ, ಚನ್ನಗಿರಿ ತಾಲ್ಲೂಕುಗಳಿಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಎಲ್ಲೆಲ್ಲಿ ನಾಲೆಗೆ ಅನಧಿಕೃತವಾಗಿ ಪಂಪ್ ಅಳವಡಿಕೆ ಮಾಡಿದ್ದಾರೆ, ಅದನ್ನು ತೆರವು ಮಾಡುವರು ಮತ್ತು ರೈತರೇ ತೆರವು ಮಾಡದಿದ್ದಲ್ಲಿ ಪರಿಕರಗಳನ್ನು ಸರ್ಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.
ನಾಲೆಗೆ ನೀರು ಬಿಡಲಾಗಿದ್ದು ಅದರಲ್ಲಿ 10 ಅಡಿ ಮಾತ್ರ ನೀರು ಬರುತ್ತಿದೆ. ಇದು 13 ಅಡಿವರೆಗೆ ಏರಿಕೆಯಾದಲ್ಲಿ ಮಾತ್ರ ಕೊನೆ ಭಾಗದ ರೈತರಿಗೆ ತಲುಪಲು ಸಾಧ್ಯವಿದ್ದು ಅಗತ್ಯವಿದ್ದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ. ಬೆಸ್ಕಾಂ ವಿಜಿಲೆನ್ಸ್ ತಂಡದವರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲಿ ಕಡಿತಗೊಳಿಸಲು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಶಾಂತಿ ಸಾಗರದಲ್ಲಿ ಜಿಲ್ಲೆಯ ಚನ್ನಗಿರಿ, ಬಹುಗ್ರಾಮಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಗೆ ನೀರು ಪೂರೈಸಲಾಗುತ್ತದೆ. ಆದರೆ ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ನಾಲೆಯಿಂದ ನೀರು ಬಿಡುಗಡೆ ಮಾಡಿದಲ್ಲಿ ಬೇಸಿಗೆಗೆ ನೀರು ಪೂರೈಸಲು ಸಾಧ್ಯವಾಗಲಿದೆ. ಮತ್ತು ರಾಜನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಬಿ.ಆರ್.ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಸುಜಾತ, ಉಪವಿಭಾಗಾಧಿಕಾರಿ ದುರ್ಗಶ್ರೀ, ಭದ್ರಾ ನಾಲಾ.ನಂ.5 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಆರ್.ಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.