ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿ ಎಂಬ ಸಂಜೀವಿನಿ – ಗಾಯಿತ್ರಿ ಸಿದ್ದೇಶ್ವರ್
ದಾವಣಗೆರೆ : ದೇಶದ ಕೋಟ್ಯಂತರ ಬೀದಿ ಬದಿ ವ್ಯಾಪಾರಿಗಳು ಬದುಕು ರೂಪಿಸಿಕೊಳ್ಳಲು, ಜೀವನ ಮಟ್ಟ ಸುಧಾರಿಸಿಕೊಳ್ಳಲು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಸಂಜೀವಿನಿಯಾಗಿದೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ತಿಳಿಸಿದರು.
ಹಳೇ ದಾವಣಗೆರೆ ಭಾಗದ ಗಡಿಯಾರದ ಕಂಬ, ಕಾಯಿಪೇಟೆ ಮಾರ್ಕೆಟ್ ಸೇರಿದಂತೆ ವಿವಿಧ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಜೊತೆ ಚರ್ಚೆ ನಡೆಸಿ, ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜೀ ಅವರು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಕೋವಿಡ್ ಬಳಿಕ ಬೀದಿ ಬದಿ ವ್ಯಾಪಾರಿಗಳ ಬದುಕು ದುಸ್ತರವಾಗಿತ್ತು. ಲೇವಾದೇವಿಗಳ ಬಳಿಕ ಅಧಿಕ ಬಡ್ಡಿಗೆ ಹಣ ತಂದು ಸಂಕಷ್ಟಕ್ಕೆ ಒಳಗಾಗಿದ್ದರು. ಅವರೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸಹೋದರನಾಗಿ, ಮನೆ ಮಗನಾಗಿ ಬೆನ್ನಿಗೆ ನಿಂತು ಪಿಎಂ ಸ್ವ-ನಿಧಿ ಯೋಜನೆ ಜಾರಿಗೆ ತಂದರು. ತಳ್ಳುವ ಗಾಡಿ, ಹಣ್ಣು ವ್ಯಾಪಾರಿಗಳು, ಬೀದಿ ಬದಿ ಉಡುಪು ಮಾರಾಟಗಾರರು, ಕ್ಷೌರಿಕರು, ಲಾಂಡ್ರಿ, ಪಂಕ್ಚರ್ ಶಾಪ್ ಸೇರಿದಂತೆ ಎಲ್ಲ ಬಗೆಯ ಬೀದಿ ಬದಿ ವ್ಯಾಪಾರಿಗಳಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡುವ ಮೂಲಕ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದ್ಧಾರೆ ಎಂದರು.
ಪಿಎಂ ಸ್ವ-ನಿಧಿ ಯೋಜನೆ ಅಡಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ 10 ಸಾವಿರ, 2ನೇ ಹಂತದಲ್ಲಿ 20 ಸಾವಿರ, 3ನೇ ಹಂತದಲ್ಲಿ 50 ಸಾವಿರ ಸಾಲ ನೀಡಿ ಆರ್ಥಿಕ ಸಹಾಯ ಮಾಡಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 16,345 ಜನ ಬೀದಿ ಬದಿ ವ್ಯಾಪಾರಿಗಳಿಗೆ 19 ಕೋಟಿಯಷ್ಟು ಹಣ ನೀಡಲಾಗಿದೆ. ಇದಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪ್ರಮಾಣಿಕ ಕೆಲಸವೂ ಕಾರಣ. ನೀವು ನನಗೆ ನೀಡುವ ಒಂದೊಂದು ಮತವೂ ಮೋದಿ ಜೀ ಅವರಿಗೆ ನೀಡಿದ ಮತಗಳು. ನಿಮ್ಮ ಜೀವನ ಮಟ್ಟ ಇನ್ನಷ್ಟು ಸುಧಾರಿಸಲು, ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಮನವಿ ಮಾಡಿದರು.
ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಡಿ.ಎಲ್.ಆರ್.ಶಿವಪ್ರಕಾಶ್, ಮುಖಂಡರಾದ ಬಸವರಾಜ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಜಯಮ್ಮ, ರೇಣುಕಾ ಕೃಷ್ಣ, ನಾಸಿರ್ ಅಹ್ಮದ್, ಗೌತಮ್ ಜೈನ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ತರಕಾರಿ ಶಿವು, ಕರಾಟೆ ಕೃಷ್ಣ, ಚೇತು ಭಾಯ್, ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದರು.
ಸಂಕಷ್ಟ ಆಲಿಸಿದ ಗಾಯಿತ್ರಿ ಸಿದ್ದೇಶ್ವರ್
ಶ್ರೀಮತಿ ಗಾಯಿತ್ರಿ ಸಿದ್ಧೇಶ್ವರ್ ಅವರು ಗಡಿಯಾರ ಕಂಬದ ಮಾರ್ಕೇಟ್, ಕಾಯಿಪೇಟೆ ಮಾರ್ಕೇಟ್ ಭಾಗದಲ್ಲಿ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ಸಂಕಷ್ಟ ಆಲಿಸಿದರು. ಅವರ ಸಂಕಷ್ಟಕ್ಕೆ ಧ್ವನಿಯಾಗಲು, ಅವರ ಬೇಡಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಲ್ಲರ ಬಳಿಕ ಚರ್ಚಿಸಿದರು. ಪಿಎಂ ಸ್ವ-ನಿಧಿ ಯೋಜನೆ ಉಪಯೋಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಲಹೆ ನೀಡಿದರು. ಈ ಬಾರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಅನ್ನೋದು ಎಲ್ಲ ವರ್ಗದವರ ಆಶಯ. ನೀವು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಗೆಲ್ಲಿಸಿ ಕಳುಹಿಸಿ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಂಡು ಎಂದು ಮನವಿ ಮಾಡಿದರು.