ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಇನ್ನಿಲ್ಲ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಹೃದಯಾಘಾತದಿಂದ ದರೆ ಇಂದು ನಸುಕಿನ ಜಾವ 1.27ರ ಸುಮಾರಿಗೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಪ್ರಸಾದ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ ಸೋಂಕು ಸೇರಿದಂತೆ ಇತರ ವಯೋಸಹಜ ಕಾಯಿಲೆಯಿಂದ ಏಪ್ರಿಲ್ 22ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಇಂದು ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್, ಕಳೆದ ಮಾರ್ಚ್ 17 ರಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.