Dr.B R Ambedkar: ದೇಶದಲ್ಲಿ ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ’ – ಪ್ರೊ.ಎಂ.ಯು. ಲೋಕೇಶ್
ದಾವಣಗೆರೆ : (Dr.B R Ambedkar) ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತೀಯತೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಸಂವಿಧಾನದ ಮೂಲಕ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಯು. ಲೋಕೇಶ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ೬೮ನೇ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿವಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬುದ್ಧ, ಬಸವಣ್ಣನವರ ನಂತರ ಸಮಾನತೆ, ಸಮಸಮುಧಾಯ ಅಭಿವೃದ್ಧಿಯ ತತ್ವ ಆದರ್ಶಗಳನ್ನು ಜಾರಿಗೊಳಿಸಿ ನವ ಸಮಾಜದ ಪರಿಕಲ್ಪನೆಯನ್ನು ಪ್ರತಿಷ್ಠಾಪಿಸಲು ಡಾ.ಅಂಬೇಡ್ಕರ್ ಯತ್ನಿಸಿದರು. ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಅನಕ್ಷರತೆ, ಮೂಢನಂಬಿಕೆಯಂತಹ ಅಂದಕಾರದಿಂದ ಕೂಡಿದ ಸಮಾಜವನ್ನು ಪರಿವರ್ತಿಸಿ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಕೈಜೋಡಿಸುವಂತೆ ಮಾಡುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬದಲಾವಣೆಯ ಮಾತುಗಳಾಡಿ ದೇಶದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ, ವಿದ್ಯಾರ್ಥಿಗಳು ಅದಕ್ಕೆ ಅವಕಾಶ ನೀಡದೆ ಅಂಬೇಡ್ಕರ್ ಅವರ ಆಶಯವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು, ಪಟ್ಟಬದ್ಧ ಹಿತಾಸಕ್ತಿಗಳಿಗೆ ಅವಕಾಶ ನೀಡದೆ ಜಾಗೃತರಾಗಿ, ಮತದಾನದ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸುವ ಸರ್ಕಾರವನ್ನು ರೂಪಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಡಾ.ಯು.ಎಸ್.ಮಹಾಬಲೇಶ್ವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸತ್ಯ ನಿಷ್ಠೆ ಪ್ರಮಾಣಿಕತೆಯನ್ನು ಮೈಗೂಡಿಸಿಕೊಂಡು ದೇಶದಲ್ಲಿ ಉತ್ತಮವಾದ ಪ್ರಜೆಗಳಾಗಿ ಬಾಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಮೌಲ್ಯ, ಸಂದೇಶಗಳನ್ನು ಪ್ರೇರಣೆಯಾಗಿ, ಮಾರ್ಗದರ್ಶಕ ಸೂತ್ರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ಅಭಿವೃದ್ಧಿ ಘಟಕದ ಸಂಚಾಲಕ ಡಾ.ನಿರಂಜನ್.ಎA.ಹೆಚ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೀನ್ ಪ್ರೊ.ಆರ್.ಶಶಿಧರ್, ಐಕ್ಯೂಎಸಿ ನಿರ್ದೇಶಕ ಪ್ರೊ.ಗೋವಿಂದಪ್ಪ ಉಪಸ್ಥಿತರಿದ್ದರು.