Patta land: ಪಟ್ಟಾ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ.! ಭೂ ಮಾಲಿಕರಿಗೆ ನೀಡಿದ್ದ ತಹಸೀಲ್ದಾರ್ ನೋಟೀಸ್ ಏನಾಯ್ತು.?

illigal soil sand mining

ಹರಿಹರ: (Patta Land) ಜಿಲ್ಲಾಧಿಕಾರಿಯವರೂ ಸೇರಿದಂತೆ ಸಂಬಂಧಿತ ಇಲಾಖಾಧಿಕಾರಿಗಳಿಗೆ ದೂರು ಅರ್ಜಿಗಳನ್ನು ನೀಡಿದ ಹೊರತಾಗಿಯೂ ಹರಿಹರ ತಾಲ್ಲೂಕಿನ ಹಲವು ಗ್ರಾಮಗಳ ಪಟ್ಟಾ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.

ಅಕ್ರಮ ಮಣ್ಣುಗಣಿಗಾರಿಕೆ ತಡೆಯಲು ಹರಿರಹ ತಹಶೀಲ್ದಾರರಿಗೆ ಡಿ. 4ರಂದು, ಜಿಲ್ಲಾಧಿಕಾರಿಯವರಿಗೆ ಡಿ.16ರಂದು ಎಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯೊಂದಿಗೆ ದೂರು ಅರ್ಜಿ ನೀಡಲಾಗಿತ್ತು. ಇದರ ಹೊರತಾಗಿಯೂ ತಾಲ್ಲೂಕಿನ ಗುತ್ತೂರು, ಸಾರಥಿ, ಪಾಮೇನಹಳ್ಳಿ, ಭೈರನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಬೃಹತ್ ಗಾತ್ರದ ಜೆಸಿಬಿಗಳಿಂದ ಎಗ್ಗಿಲ್ಲದೆ ಮಣ್ಣನ್ನು ಅಗೆದು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ.

ಗುತ್ತೂರಿನಲ್ಲಿ ಹೊಸದಾಗಿ ಮಣ್ಣು ಗಣಿಗಾರಿಕೆಯನ್ನು ಬುಧವಾರ ರಾತ್ರಿ ಕೈಗೊಂಡಿರುವುದರಿಂದ ಸಿದ್ದಪ್ಪಜ್ಜರ ಮಠ ಹಾಗೂ ಮುಸ್ಲಿಂ ಖಬರಸ್ತಾನ್ ಹಾಗೂ ನದಿಗೆ ತೆರಳುವ ರಸ್ತೆ ಅಸ್ಥಿತ್ಕ್ಕೆ ಧಕ್ಕೆ ಒದಗಿಸಲಿದೆ ಎಂದು ಅವರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಮಾಡುವ ಜಮೀನಿನ ಒಂದು ಪುಟ್ಟಿ ಮಣ್ಣನ್ನು ಇತರೆಡೆಗೆ ಸಾಗಿಸಲು ಭೂ ಕಂದಾಯ ಕಾಯ್ದೆಯಲ್ಲಿ ಅವಕಾಶ ಇರದಿದ್ದರೂ ರಾಜಾರೋಷವಾಗಿ ಎಕರೆಗಟ್ಟಲೆ ಜಮೀನುಗಳಲ್ಲಿನ ಮಣ್ಣನ್ನು ಸಾಗಿಸುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಿ ತಾಲ್ಲೂಕಿನಾದ್ಯಂತ ಮಣ್ಣು ಗಣಿಗಾರಿಕೆಯನ್ನು ನಿಲ್ಲಿಸಬೇಕು, ಕೃಷಿ ಜಮೀನುಗಳನ್ನು, ಪರಿಸರವನ್ನು ಸಂರಕ್ಷಿಸಬೇಕಾಗಿ ಅವರು ಆಗ್ರಹಿಸಿದ್ದಾರೆ.

ಹಲವು ತಿಂಗಳ ಹಿಂದೆ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಭೂ ಮಾಲಿಕರಿಗೆ ಹರಿಹರ ತಹಸೀಲ್ದಾರ್ ನೋಟೀಸ್ ನೀಡಿದ್ದರು. ನೋಟೀಸ್ ಗೆ ಉತ್ತರ ಬರದೇ ಇದ್ದರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಭೂ ಕಾಯ್ದೆ ನಿಯಮಗಳನ್ನು ನೋಟೀಸ್ ನಲ್ಲಿ ಅಡಕಪಡಿಸಿ ರೈತರಿಗೆ ತಿಳಿಸಲಾಗಿತ್ತು. ಆದರೆ ಆ ನೋಟೀಸ್ ನೀಡಿ ಬಾಯಿಗೆ ಬೀಗ ಹಾಕಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನಾದರೂ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಜರುಗಿಸಲು ಎಂದು ಹೋರಾಟಗಾರರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!