Certificate: ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದುರುಪಯೋಗ ಮಾಡುತ್ತಿರುವುದು ಕಂಡು ಬಂದಲ್ಲಿ ಕಾನೂನಾತ್ಮಕ ಕ್ರಮ – ಎಸ್ ಪಿ

ದಾವಣಗೆರೆ (Certificate) ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ಮೀಸಲಾತಿ ದುರುಪಯೋಗ ಪಡಿಸಿಕೊಂಡರೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸಮಾನತೆ ಕಲ್ಪಸಲು ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಕೆಲವೊಂದಿಷ್ಟು ಸಮುದಾಯಗಳು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ನೈಜವಾಗಿ ತುಳಿತಕ್ಕೆ ಒಳಗಾದ ಫಲಾನುಭವಿಗಳಿಗೆ ಅನ್ಯಾಯವೆಸಗುತ್ತಿವೆ. ಈ ಕುರಿತು ದಲಿತ ಮುಖಂಡರೊಬ್ಬರ ಆರೋಪಕ್ಕೆ ಸ್ಪಂದಿಸಿದ ಎಸ್ಪಿ ಉಮಾಪ್ರಶಾಂತ್ ಈ ಕುರಿತು ನಿರ್ದಿಷ್ಟವಾಗಿ ಪ್ರಕರಣಗಳು ಕಂಡು ಬಂದಿದ್ದು, ಮಾಹಿತಿ ಇದ್ದಲ್ಲಿ ದೂರು ನೀಡಿ, ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಗಳೂರಿನ ದಲಿತ ಮುಖಂಡರೊಬ್ಬರು ಮಾತನಾಡಿ, ಇಂದಿನ ಆಧುನಿಕತೆಯ ಜಗತ್ತಿನಲ್ಲಿದ್ದರೂ ಸಹ ಇಂದಿಗೂ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಕೆಲವು ಪುಣ್ಯಸ್ಥಳಗಳ ದೇವಸ್ಥಾನಗಳಿಗೆ ಮುಕ್ತ ಪ್ರವೇಶವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೆಯೇ ಮತ್ತೊಬ್ಬ ದಲಿತ ಮುಖಂಡ ಮಾತನಾಡಿ ಪ್ರಸ್ತುತ ಹರಿಜನರನ್ನು ಗುರಿಯಾಗಿಸಿಕೊಂಡು ಮತಾಂತರಿಸುವಂತಹ ಪ್ರಕರಣಗಳು ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚಿರುವ ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದ ಜನನಿಬಿಡ ಪ್ರದೇಶಗಳಲ್ಲಿ ಜಾತೀಯತೆ, ಬಾಲ್ಯವಿವಾಹದಂತಹ ಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಆದಾಗ್ಯೂ ತಮಗೆ ಇಂತಹ ಪ್ರಕರಣಗಳ ಕುರಿತು ನಿಖರ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದರೂ ಕೂಡ ಶೇ.80 ಕ್ಕೂ ಅಧಿಕ ಪ್ರಕರಣಗಳು ಬೀಗ ಹಾಕಿದ ಹಾಗೂ ಒಂಟಿ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ಅವಶ್ಯಕತೆ ಇರುವಲ್ಲಿ ಸಿಸಿಟಿವಿಗಳನ್ನು ಅಳವಡಿಸಿ. ಅವುಗಳಿಂದ ತನಿಖೆಗೆ ಸಹಾಯವಾಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದಲ್ಲಿ ಮಾಹಿತಿ ನೀಡಿದರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಾಯವಾಗಲಿದೆ ಎಂದರು.
ಸಭೆಯಲ್ಲಿ ಪ್ರಸ್ತಾಪಿಸಿದ ದೂರುಗಳ ಪೈಕಿ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಹಾಗೆಯೇ ಇನ್ನಿತರೆ ಇಲಾಖೆಗಳ ದೂರುಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಕಳಹಿಸಿ ವರದಿ ಪಡೆಯಲಾಗುತ್ತದೆ ಎಂದ ಅವರು, ಎಲ್ಲಾ ಸಮುದಾಯದವರು ಯಾವುದೇ ಜಾತಿ ವೈಷಮ್ಯಗಳಿಗೆ ಕಿವಿಗೊಡದೆ ಸಾಮರಸ್ಯದಿಂದ ಬಾಳಬೇಕು. ಹೆಲ್ಮೆಟ್ ಧರಿಸಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಉತ್ತಮ ನಾಗರೀಕ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್, ನಗರ ಪೊಲೀಸ್ ಉಪಾಧೀಕ್ಷಕ ಬಿ.ಶರಣಬಸವೇಶ್ವರ ಸೇರಿದಂತೆ ವಿವಿಧ ಸಂಘನಟನೆಗಳ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.