ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು: ಎಡಿಸಿ ಪೂಜಾರ್ ವೀರಮಲ್ಲಪ್ಪ

IMG-20210823-WA0016

ದಾವಣಗೆರೆ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಪ್ರತಿಪಾದಿಸಿ, ಮನುಕುಲ ಕುಟುಂಬಕ್ಕೆ ಸಾರಿ, ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ, ದೇಶದೆಲ್ಲೆಡೆ ಪಸರಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಶ್ಲಾಘಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸರಳ ಮತ್ತು ಸಾಂಕೇತಿಕವಾಗಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ಹಿಂದೂ ಧರ್ಮ, ಸಂಸ್ಕೃತಿಗಳನ್ನು ರಕ್ಷಿಸಿ ಕೆಳವರ್ಗದವರನ್ನು ಮೇಲೆತ್ತುವ ಉದ್ದೇಶದಿಂದ ಯಾರನ್ನೂ ದ್ವೇಷಿಸದೇ ಸಂಘಟನೆಯಿಂದ, ಶಿಕ್ಷಣದಿಂದ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೊಣ ಎಂದು ಶತಮಾನಗಳ ಹಿಂದೆ ಜನಕ್ಕೆ ಸಾರಿದ ಸಾಮಾಜಿಕ ಹರಿಕಾರ ನಾರಾಯಣ ಗುರು ಅವರು ಎಂದು ಸ್ಮರಿಸಿದರು.

ಹದಿನೆಂಟು ಮತ್ತು ಹತ್ತೊಂಬತ್ತನೆ ಶತಮಾನದ ಬ್ರಿಟೀಷ್ ಆಳ್ವಿಕೆಯಲ್ಲಿ ಭಾರತೀಯರು ಗುಲಾಮರಾಗಿದ್ದ ಇತಿಹಾಸವಿದೆ. ಕೇರಳದ ಬಹುಸಂಖ್ಯಾತ ಈಳವ ಜನಾಂಗದವರನ್ನು ಅಸ್ಪುರ್ಶ್ಯ ವರ್ಗವೆಂದು ಪರಿಗಣಿಸಲಾಗುತ್ತಿತ್ತು, ಹೀಗಾಗಿ ಅವರಿಗೆ ದೇವಾಲಯಗಳಿಗೆ ಪ್ರವೇಶವಿರಲಿಲ್ಲ. ಅವಿದ್ಯೆಯಿಂದಾಗಿ ಸಾಮಾಜಿಕ ಕ್ರೂರ ಶೋಷಣೆಗೆ ಒಳಗಾದ ಕೆಳವರ್ಗದವರಿಗಾಗಿ ನಾರಾಯಣಗುರು ಅವರು ಅರವಿಪುರಂನಲ್ಲಿ 1888 ರಲ್ಲಿ ಮೊಟ್ಟ ಮೊದಲು ಶಿವರಾತ್ರಿ ದಿನದಂದು ಶಿವಲಿಂಗ ದೇವಾಲಯ ಪ್ರತಿಷ್ಠಾಪನೆ ಮಾಡಿ ದಲಿತರಿಗೆ ಪ್ರವೇಶಿಸುವ, ಪೂಜೆ ಮಾಡುವ ವ್ಯವಸ್ಥೆ ಮಾಡಿದರು ಎಂದು ತಿಳಿಸಿದರು.

ಗುರುಗಳು ಸದಾ ಚಲಿಸುವ ಹರಿಕಾರ. ಸಮಾಜದ ಸುತ್ತಮುತ್ತಲಿರುವ ಕಂದಾಚಾರ, ಮೂಢನಂಬಿಕೆಗಳನ್ನು ಟೀಕಿಸಿ ಸರಿಪಡಿಸುತ್ತಿದ್ದರು. ವಿಶ್ವ ಕವಿ ರವೀಂದ್ರನಾಥ ಠಾಗೂರ್ ಕೂಡ, ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷರನ್ನು ಕಂಡಿಲ್ಲ ಎಂದು ಉದ್ಗರಿಸಿದ್ದರು. ಹಾಗೂ ಗಾಂಧೀಜಿಯವರು ತಮ್ಮ ಹರಿಜನೋದ್ದಾರಕ್ಕಾಗಿ ಸ್ಪೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. ಹಾಗಾಗಿ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಮತ್ತು ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳ ಹೋಲಿಕೆಯನ್ನು ರೋಮನ್ ಕ್ಯಾಲೆಂಡರ್ ನಲ್ಲಿ ಕಾಣಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಮಾಜದ ಅಧ್ಯಕ್ಷ ಹೆಚ್.ಶಂಕರ್, ಕಾರ್ಯದರ್ಶಿ ಎ.ನಾಗರಾಜ್, ಉಪಾಧ್ಯಕ್ಷ ಶಾಂತಾರಾಮ್, ಸಿ.ವಿ.ರವೀಂದ್ರಬಾಬು, ಖಜಾಂಚಿ ಇ.ದೇವೇಂದ್ರಪ್ಪ, ಜಂಟಿ ಕಾರ್ಯದರ್ಶಿ ಇ.ಭರಮಪ್ಪ, ನಿರ್ದೇಶಕರಾದ ರಾಜಣ್ಣ, ಮಹಾಬಲೇಶ್, ರಾಮದಾಸ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!