Food Kit: ಹೊನ್ನಾಳಿಯಲ್ಲಿ ನೀಡಿದ ಕಾರ್ಮಿಕರ ಫುಡ್ ಕಿಟ್ ನಲ್ಲಿ ಕೊಳೆತ ಆಹಾರವೆಂಬ ಆರೋಪ.!
ದಾವಣಗೆರೆ: ಲಾಕ್ಡೌನ್ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಫುಡ್ ಕಿಟ್ ವಿತರಣೆ ಮಾಡಲು ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದೆಯೇನೊ ಸರಿ.ಆದರೆ, ಆ ಕಿಟ್ ನಲ್ಲಿ ಹುಳುಗಳು ತುಂಬಿರುವ ದಿನಸಿ ಸಾಮಾಗ್ರಿಗಳನ್ನು ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈಗಾಗಲೇ ರಾಜ್ಯದ ತುಂಬೆಲ್ಲಾ ಈ ಆರೋಪ ಕೇಳಿಬಂದಿದ್ದು, ಈ ಮುಂಚೆ ಹೊನ್ನಾಳಿಯ ಮಾಜಿ ಶಾಸಕ ಶಾಂತನಗೌಡ ಕೂಡ ಈ ಬಗ್ಗೆ ಆರೋಪಿಸಿದ್ದರು. ಕಟ್ಟಡ ಕಾರ್ಮಿಕರಿಗೆ ಕೊಡುವ ಫುಡ್ ಕಿಟ್ ನಲ್ಲಿ ಹುಳುಗಳೇ ತುಂಬಿದ್ದು, ಸರ್ಕಾರ ನೀಡುವುದಾದರೆ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಿಸಬೇಕು. ಇಲ್ಲವಾದರೆ ಇಂತಹ ಕೊಳೆತ ಧಾನ್ಯಗಳನ್ನು ಕೊಡುವುದಾದರೂ ಯಾತಕ್ಕಾಗಿ ಎಂದು ಪ್ರಶ್ನಿಸಿದ್ದರು.
ಸರ್ಕಾರದ್ದೇನಿದ್ದರೂ ಕೇವಲ ಹಣ ಬಿಡುಗಡೆ ಮಾಡಿ ಕೈತೊಳೆದುಕೊಳ್ಳುವ ಕೆಲಸ ಮಾತ್ರವೇ ಎಂಬಂತಾಗಿದೆ. ಅಧಿಕಾರಿ ವರ್ಗದವರು ಈ ವಿಚಾರದಲ್ಲಿ ನಡೆಸುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ಚಕಾರವೆತ್ತದೆ ಜಾಣ ಮೌನ ವಹಿಸಿರುವ ಕಾರಣ ನೂರಾರು ಕೋಟಿ ಹಣ ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.
ಇದು ಸರ್ಕಾರದ ತಪ್ಪೋ ಅಥವಾ ಅಧಿಕಾರಿ ವರ್ಗದವರದ್ದೋ ಎಂಬುದು ಬಹಿರಂಗವಾಗಬೇಕಿದೆ.