ಹೊಸ ಶಿಕ್ಷಣ ನೀತಿ ವಿರುದ್ಧ ವಿದ್ಯಾರ್ಥಿಗಳು, ಪಾಲಕರು ಧ್ವನಿಯೆತ್ತಿ: ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ್ ಕರೆ
ದಾವಣಗೆರೆ: ಹೊಸ ಶಿಕ್ಷಣ ನೀತಿಯಿಂದ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೊಡಲಿಪೆಟ್ಟು ಬೀಳಲಿದ್ದು, ಇದರ ವಿರುದ್ಧ ಪಾಲಕರು, ವಿದ್ಯಾರ್ಥಿಗಳು ಧ್ವನಿ ಎತ್ತುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರು, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಡಾ.ಮಹಾಬಲೇಶ್ವರ ರಾವ್ ಹೇಳಿದರು.
ಇತ್ತೀಚೆಗೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಹೊಸ ಶಿಕ್ಷಣ ನೀತಿಯ ಭಾಗವಾದ ೪ ವರ್ಷದ ಪದವಿ ವಿರೋಧಿಸಿ ಹಮ್ಮಿಕೊಂಡಿದ್ದ ವಲಯ ಮಟ್ಟದ ವೆಬಿನಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನ, ಪ್ರಜಾತಾಂತ್ರಿಕ, ಒಕ್ಕೂಟ ವಿರೋಧಿಯಾಗಿ ಈ ಸರ್ಕಾರ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ ಎಂದು ಆಕ್ಷೇಪಿಸಿದರು.
ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಭಾಗವಾಗಿ ಸಾಹಿತಿಗಳನ್ನು ಸಚಿವರು ಭೇಟಿಯಾಗುವದು ಏಕೆ? ಈ ಶಿಕ್ಷಣ ನೀತಿಯನ್ನು ದಿಗ್ಗಜ ಸಾಹಿತಿಗಳು ಓದಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.
ಜೆಎನ್‌ಯು ನಿವೃತ್ತ ಪ್ರಾಧ್ಯಾಪಕರು ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಹೊಸ ಶಿಕ್ಷಣ ನೀತಿ ಜಾರಿಗೊಳಿಸುವುದಕ್ಕೆ ಯಾವುದೇ ಪೂರ್ವ ಸಿದ್ಧತೆ ಇಲ್ಲ. ಕೇಂದ್ರ ಸರ್ಕಾರವನ್ನು ಮೆಚ್ಚಿಸುವ ಹುನ್ನಾರದಿಂದ ಇಂತಹ ಅವೈಜ್ಞಾನಿಕ ನೀತಿಯನ್ನು ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹೇರಲಾಗುತ್ತಿದೆ ಎಂದು ದೂರಿದರು.
ಎಐಎಸ್‌ಇಸಿ ಸೆಕ್ರೆಟರಿಯೆಟ್ ಸದಸ್ಯರು ವಿ.ಎನ್.ರಾಜಶೇಖರ್ ಮಾತನಾಡಿ, ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.೭೦ರಷ್ಟು ಖಾಲಿ ಹುದ್ದೆಗಳಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ. ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಹೆಚ್ಚುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳಿಗೆ ಹೊಸ ಶಿಕ್ಷಣ ನೀತಿ ಏನು ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದರು.
ಈ ಹೊಸ ನೀತಿಯಿಂದ ವಿಶ್ವವಿದ್ಯಾನಿಲಯದ ಸ್ವಾಯತ್ತತೆ, ಪ್ರಜಾತಾಂತ್ರಿಕ ಶಿಕ್ಷಣದ ಮೇಲೆ ಸರ್ಕಾರ ಪ್ರಹಾರ ನಡೆಸುತ್ತಿದೆ. ಶಿಕ್ಷಕರು, ಶಿಕ್ಷಣ ತಜ್ಞರನ್ನು ಕಡೆಗಣಿಸಿ ಜಾರಿಗೆ ತಂದಿರುವುದು ಖಂಡನಾರ್ಹ ಎಂದರು.
ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷರು ಅಲ್ಲಮಪ್ರಭು ಬೆಟ್ಟದೂರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಅಕ್ಷಯ ವಹಿಸಿದ್ದರು. ಸಂಘಟನಾಕಾರರಾದ ನಾಗಜ್ಯೋತಿ ಬಿ.ಎನ್ ಪ್ರಾಸ್ತಾವಿಕ ನುಡಿದರು.