Unemployment day: ಸೆ. 17 ರಂದು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ – ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಮೈನುದ್ದೀನ್ ಹೆಚ್ ಜೆ
ದಾವಣಗೆರೆ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿರಂತರವಾಗಿ ಏರಿಕೆಯಾಗಿದ್ದು ಇದನ್ನು ಖಂಡಿಸಿ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಇದೇ ಸೆ.17ರಂದು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಿಸಲಾಗುವುದು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಮೈನುದ್ದೀನ್ ಹೆಚ್ ಜೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 45 ವರ್ಷಕ್ಕಿಂತ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಇಂದು ದೇಶದಲ್ಲಿ ಸೃಷ್ಟಿಯಾಗಿದೆ. 2014 ರ ಚುನಾವಣೆ ಭಾಷಣದಲ್ಲಿ ಪ್ರತಿವರ್ಷ ದೇಶದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದ ಪ್ರಧಾನಿ ಅವರು ಕೊಟ್ಟಮಾತನ್ನು ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಲು ಸರ್ಕಾರದ ಜನವಿರೋಧಿ ನೀತಿಗಳೇ ಕಾರಣ. ತಪ್ಪು ನಿರ್ಧಾರದಿಂದ ದೇಶದಲ್ಲಿ ಅನೇಕ ಸಂಸ್ಥೆಗಳು ಮುಚ್ಚಿಹೋಗಿವೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಅದಕ್ಕಾಗಿ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಪ್ರತಿಯೊಬ್ಬ ಭಾರತ ಪ್ರಜೆ ಆಚರಿಸಬೇಕೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸಾಗರ ಎಲ್.ಎಂ. ಹೆಚ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಾಧಿಕ್ ಸದ್ದಾಮ್, ದಕ್ಷಿಣ ಅಧ್ಯಕ್ಷರಾದ ಸೈಯದ್ ಇರ್ಫಾನ್, ಉತ್ತರ ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ರಫೀಕ್, ಯುವ ಮುಖಂಡರಾದ ಚಿರಂಜೀವಿ ಇದ್ದರು.