ಮಾಜಿ ಶಾಸಕ ಶಾಂತನಗೌಡರಿಗೆ ಕಿವಿ ಹಿಂಡಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೆಜ್ಜೆಯಿಡದ ಮಾಜಿ ಶಾಸಕರು ಈಗ ಚುನಾವಣೆ ಕಾರಣಕ್ಕಾಗಿ ಹೊರ ಬಂದು ಕೋವಿಡ್ ನಿಂದ ಮೃತಪಟ್ಟವರ ಮನೆಗೆ ಹೋಗಿ ಅವರ ಫೋಟೊಗೆ ಹಾರ ಹಾಕುವ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಮಾಜಿ ಶಾಸಕ ಶಾಂತನಗೌಡ ಅವರಿಗೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕುಟುಕಿದರು.
ನಗರದ ಎಪಿಎಂಸಿ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಫುಡ್ ಕಿಟ್ ವಿತರಿಸಿ ಮಾತನಾಡಿದ ಅವರು, ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಜನರು ಪ್ರಜ್ಞಾವಂತರು, ಅವರಿಗೆ ಯಾರು ಕೆಲಸ ಮಾಡುತ್ತಾರೆಂದು ಚೆನ್ನಾಗಿಗೊತ್ತು. ಆದ್ದರಿಂದ ಅವರು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ ಎಂದರು.
ಮಾಜಿ ಶಾಸಕರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಜನರು ಅವರನ್ನು ಮೂರು ಬಾರಿ ಸೋಲಿಸಿದರು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿಲ್ಲ. ಮೊದಲು ಈ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆ ಏನೆಂದು ಅವರು ಉತ್ತರಿಸಬೇಕೆಂದು ಆಗ್ರಹಿಸಿದರು.
ಬಡವರಿಗೆ ಕೊಡುವ ಸವಲತ್ತುಗಳಲ್ಲಿ ನಾನೆಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಇನ್ನು ಮುಂದೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದಿಂದ 12 ಸಾವಿರ ಪುಡ್ ಕಿಟ್ ಬಂದಿದ್ದು, ಈಗಾಗಲೇ 10 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಫುಡ್ ಕಿಟ್‌ಗಳನ್ನು ವಿತರಿಸಲಾಗಿದೆ. ಈಗಾಗಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವಳಿ ತಾಲೂಕಿನಲ್ಲಿ ಅವಶ್ಯವಿರುವಷ್ಟು ಕಾರ್ಮಿಕರ ಪಟ್ಟಿ ನೀಡಲು ತಿಳಿಸಲಾಗಿದೆ. ಪಟ್ಟಿ ಬಂದ ನಂತರ ಸಚಿವರೊಂದಿಗೆ ಮಾತನಾಡಿ ಎಲ್ಲರಿಗೂ ಕಿಟ್ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.