ಅಭಿಮಾನಿಗಳಲ್ಲಿ ಪ್ರೀತಿಯ ಮನವಿ ಹಾರ ತುರಾಯಿ ಫ್ಲೆಕ್ಸ್ ದುಂದು ವೆಚ್ಚ ಬೇಡ – ಈಶ್ವರ್ ಖಂಡ್ರೆ
ಬೆಂಗಳೂರು: ಅಭಿಮಾನಿಗಳಾದ ತಾವು ನಾನು ಸಚಿವರಾದ ದಿನದಿಂದಲೂ ನಿತ್ಯ ಬೀದರ್ ಜಿಲ್ಲೆಯ ಅದರಲ್ಲೂ ಭಾಲ್ಕಿ ಕ್ಷೇತ್ರದಿಂದ ಬೆಂಗಳೂರಿನವರೆಗೆ ಸಾವಿರಾರು ಜನರು ಆಗಮಿಸಿ, ತಮಗೆ ಹಾರ, ತುರಾಯಿ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದು, ಮತದಾರರು ಮತ್ತು ಜನತೆಯ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಇನ್ಮುಂದೆ ಯಾರು ಕೂಡಾ ನನಗೆ ಸನ್ಮಾನ ಮಾಡಬಾರದೆಂದು ಮನವಿ ಮಾಡುತ್ತೇನೆ.
ಸುಮಾರು 7೦೦ ಕಿಲೋ ಮೀಟರ್ ದೂರದಿಂದ 4-5 ಸಾವಿರ ರೂಪಾಯಿ ವೆಚ್ಚ ಮಾಡಿಕೊಂಡು ಬೆಂಗಳೂರಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಹೀಗೆ ಬರುವವರನ್ನು ತಾವು ಸಚಿವ ಸಂಪುಟ ಸಭೆ, ಅಧಿಕಾರಿಗಳ ಸಭೆ-ಸಮಾರಂಭಗಳಲ್ಲಿದ್ದಾಗ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದು ತಮಗೂ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಯಾರೂ ಸಹ ಬೀದರ್ ಭಾಲ್ಕಿಯಿಂದ ಬೆಂಗಳೂರಿಗೆ ಆಗಮಿಸಿ, ನನಗೆ ಸನ್ಮಾನ ಮಾಡುವುದು ಬೇಡ. ಜಿಲ್ಲೆಯ ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿ ಆಗಿದ್ದೇನೆ.
ಬೆಂಗಳೂರಿನವರೆಗೆ ಆಗಮಿಸಿ, ಶ್ರಮಪಡಬೇಡಿ. ಖುದ್ದು ನಾನೆ ಎರಡು ಮೂರು ದಿನದಲ್ಲಿ ಬೀದರ್ ಜಿಲ್ಲೆಗೆ ಆಗಮಿಸಲಿದ್ದು, ಹಂತ ಹಂತವಾಗಿ ತಾಲೂಕು ಮಟ್ಟ, ಹೋಬಳಿ ಮಟ್ಟ, ಪಂಚಾಯ್ತಿ ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಆಲಿಸುತ್ತೇನೆ ಮತ್ತು ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಾಡಿನಾದ್ಯಂತದ ಜನತೆ, ತಮಗೆ ತೋರಿಸುತ್ತಿರುವ ಪ್ರೀತಿ, ವಾತ್ಸಲ್ಯಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.