ರಾಜ್ಯ ಸುದ್ದಿ

ಕೆಂಗಲ್ ಹನುಮಂತಯ್ಯ ಅವರ ಕುರಿತ ಗ್ರಂಥ ಇದೇ ವರ್ಷ ಬಿಡುಗಡೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರತಿ ಕನ್ನಡಿಗನಿಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಬದುಕು, ಹೋರಾಟದ ಬಗ್ಗೆ ಪರಿಚಯಿಸುವ ಗ್ರಂಥವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮ ದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕದ 2 ನೇ ಮುಖ್ಯಮಂತ್ರಿ , ಧೀಮಂತ ನಾಯಕ, ಕೇಂದ್ರ ರೈಲ್ವೆ ಸಚಿವ, ಕರ್ನಾಟಕದ ಏಕೀಕರಣದ ಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆಂಗಲ್ ಹನುಮಂತಯ್ಯನವರಿಗೆ ಇಂದು ಅವರ ಜನ್ಮದಿನದಂದು ಗೌರವಾರ್ಪಣೆ ಮಾಡಿದ್ದೇವೆ.
ಅವರ ಜೀವನ ಚರಿತ್ರೆಯನ್ನು ಒಗ್ಗೂಡಿಸಿ ಅಧಿಕೃತ ಗ್ರಂಥ ಸಿದ್ಧಪಡಿಸಿ ಈ ವರ್ಷ ಬಿಡುಗಡೆ ಮಾಡಲಾಗುವುದು. ಈಗಾಗಲೇ ರಾಮನಗರದಲ್ಲಿ ಕೆಂಗಲ್ ಹನುಮಂತ ಯ್ಯನವರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಆದಷ್ಟು ಬೇಗನೆ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು- ಮೈಸೂರು ರಸ್ತೆಯ ಮಾರ್ಗದ ಪ್ರಮುಖ ಸ್ಥಳದಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಬಿಬಿಎಂಪಿಯಲ್ಲಿ ಪ್ರಸ್ತಾವನೆ ಇದೆ. ಅದಕ್ಕೆ ಕೂಡಲೇ ಒಪ್ಪಿಗೆ ನೀಡಿ ಆ ಕೆಲಸವನ್ನು ಈ ವರ್ಷವೇ ಪ್ರಾರಂಭಿಸಲಾಗುವುದು. ಕೆಂಗಲ್ ನಲ್ಲಿರುವ ಅವರ ಸ್ಮಾರಕವನ್ನು ಸ್ಮೃತಿ ಉದ್ಯಾನವನ ಎಂದು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯ ಅನುದಾನವನ್ನೂ ಒದಗಿಸಲಾಗುವುದು. ಅವರ ಸ್ಮರಣೆ ನಿರಂತರವಾಗಿರಲಿ ಎಂದರು.
ಕರ್ನಾಟಕ ರಾಜ್ಯ ಸ್ಥಾಪನೆಯಾಗಲು, ಕನ್ನಡ ಮಾತನಾಡುವ ಎಲ್ಲಾ ಜನರನ್ನು ಒಗ್ಗೂಡಿಸಿದ ಪ್ರಮುಖರಲ್ಲಿ ಕೆಂಗಲ್ ಹನುಮಂತಯ್ಯ ಅವರು ಅಗ್ರಗಣ್ಯರು.ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭಾ ಸದಸ್ಯರು,ಲೋಕಸಭಾ ಸದಸ್ಯರಾಗಿ, ಕರ್ನಾಟಕದ ಪ್ರಾರಂಭಿಕ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಧೀಮಂತ ನಾಯಕರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ನೀಡಿ, ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿಯನ್ನು ಹಾಕಿದವರು ಎಂದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!