ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ಮಾಡಿ : ಸಿದ್ದರಾಮಯ್ಯ
ಮಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ತೋರಿಸುತ್ತೇವೆ ಅಂದರೆ ಬೇಡ ಅಂದೋರು ಯಾರು? ಆದರೆ ಜನರಿಗೆ ಸತ್ಯ ಏನು ನಡೆದಿದೆ ಅನ್ನೋದನ್ನು ತೋರಿಸಬೇಕು. ಕಾಶ್ಮೀರದಲ್ಲಿ ಏನು ನಡೆದಿದೆ? ಯಾವುದು ಸತ್ಯ? ಅನ್ನುವುದನ್ನು ತೋರಿಸಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರು ಏನ್ ಮಾಡಿದರು? ಕಾಶ್ಮೀರಿ ಪಂಡಿತರು ಸೇರಿದಂತೆ ಬೇರೆ ಸಮುದಾಯದವರೊಂದಿಗೆ ಏನೆಲ್ಲಾ ಆಗಿದೆ ಅನ್ನುವುದನ್ನು ತೋರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವ ಸಲುವಾಗಿ ಮಂಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ದೇಶದಲ್ಲಿ ಸಂಚಲನ ಮೂಡಿಸಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಗುಜರಾತ್‌ನಲ್ಲಿ ನಡೆದದ್ದು, ಲಖಿಂಪುರದಲ್ಲಿ ನಡೆದದ್ದು ತೋರಿಸಬೇಕು. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನಾನು ಇನ್ನೂ ನೋಡಿಲ್ಲ. ನಾನು ಸಿನಿಮಾ ನೋಡುವುದೇ ಕಡಿಮೆ. ಸಿನೆಮಾ ನೋಡಲೇಬೇಕು ಅಂತ ಏನಿದೆ? ಬಹಳ ಸಿನಿಮಾಗಳನ್ನು ನಾನು ನೋಡಿಲ್ಲ. ಅದೇ ಪ್ರಕಾರ ಇದನ್ನೂ ನೋಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇನ್ನು ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಭೋದನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಭಗವದ್ಗೀತೆ ವಿರೋಧಿಯಲ್ಲ. ಮಕ್ಕಳಿಗೆ ನೈತಿಕ ವಿದ್ಯೆ ಕಲಿಸಲು ನಮ್ಮದೇನೂ ತಕರಾರಿಲ್ಲ. ನಾವು ಸಂವಿಧಾನ ಮತ್ತು ಸೆಕ್ಯುಲರಿಸಂನಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ ಆದರೂ ಹೇಳಿಕೊಡಲಿ, ಕುರಾನ್ ಆದರೂ ಹೇಳಿಕೊಡಲಿ, ಬೈಬಲ್ ಆದರೂ ಹೇಳಿಕೊಡಲಿ. ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅಷ್ಟೆ ಎಂದರು. ಮಕ್ಕಳಿಗೆ ಮಾರ್ಕೆಟ್ ಅನುಗುಣವಾಗಿ ಕ್ವಾಲಿಟಿ ಎಜುಕೇಶನ್ ನೀಡಬೇಕು. ಭಗವದ್ಗೀತೆಯನ್ನು ಮನೆಗಳಲ್ಲಿ ಮಕ್ಕಳಿಗೆ ಹೇಳಿ ಕೊಡಲ್ವಾ? ನಾನು ಕೂಡ ಹಿಂದೂ. ನನಗೂ ನನ್ನ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದಾರೆ. ನೈತಿಕ ಶಿಕ್ಷಣ ಬೇಕು. ಹಾಗಂತ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ನಾನು ಭಗವದ್ಗೀತೆ, ಬೈಬಲ್, ಕುರಾನ್ ವಿರೋಧಿ ಅಲ್ಲ. ನಮ್ಮಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಪಂಚರಾಜ್ಯ ಚುನಾವಣೆಯ ಬಳಿಕ ಕಾಂಗ್ರೆಸ್ ಸಾಫ್ಟ್ ಹಿಂದುತ್ವ ಪ್ರದರ್ಶಿಸುತ್ತಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಮ್ಮಲ್ಲಿ ಸಾಫ್ಟ್ ಹಿಂದುತ್ವನೂ ಇಲ್ಲ, ಹಾರ್ಡ್ ಹಿಂದುತ್ವನೂ ಇಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಸಂವಿಧಾನ ನೀಡಿದೆ. ಸಂವಿಧಾನದ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಹೈಕೋರ್ಟ್ ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯದವರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ. ಕೋರ್ಟ್ ನಿರ್ಧಾರ ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧ ಮಾಡಬಾರದು. ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಹಿಂದೂ, ಮುಸ್ಲಿಂ ಯಾರೇ ಆದರೂ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದಿದ್ದಾರೆ.