ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಕಪ್ಪುಬಟ್ಟೆ ಪ್ರದರ್ಶನ ಮಾಡುತ್ತೇವೆ: ಬಸವರಾಜು ವಿ ಶಿವಗಂಗಾ ಎಚ್ಚರಿಕೆ
ಚನ್ನಗಿರಿ : ಅಡಿಕೆ ಬೆಳೆಗೆ ಭವಿಷ್ಯವಿಲ್ಲ, ಸರ್ಕಾರ ಪ್ರೋತ್ಸಾಹ ನೀಡಬಾರದು ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರೈತರ ಕ್ಷಮೆ ಕೇಳಿ ಕೂಡಲೇ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲವಾದರೆ ನಿಮ್ಮ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನವನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಮಾತನಾಡಿದ ಅವರು ಅಡಿಕೆ ಬೆಳೆಗಾರರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನ ಆರಗ ಜ್ಞಾನೇಂದ್ರ ಮಾಡುತ್ತಿದ್ದಾರೆ. ಸಚಿವ ಸ್ಥಾನದಲ್ಲಿದ್ದು ಇಂಥ ಹೇಳಿಕೆ ನೀಡಿರುವುದು ಸರಿಯಲ್ಲ. ಚನ್ನಗಿರಿ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ರೈತರು ಅಡಿಕೆ ತೋಟವನ್ನ ನಂಬಿ ಬದುಕುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಇವರ ಹೇಳಿಕೆಯಿಂದ ಇಡೀ ಅಡಿಕೆ ಬೆಳೆಗಾರರು ಧೈರ್ಯಗೆಡುವಂತಾಗಿದೆ, ಸರ್ಕಾರದಲ್ಲಿ ಸಚಿವರಾಗಿರುವ ಇವರು ರೈತರಿಗೆ ಉತ್ತೇಜನ ನೀಡುವಂತ ಮಾತುಗಳನ್ನಾಡಬೇಕು ಆದರೆ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಸಚಿವರು ರೈತರ ಅಭಿವೃದ್ಧಿ ಬಗ್ಗೆ ಚಿಂತನ ಮಾಡಬೇಕು ಇಂಥ ಹೇಳಿಕೆ ನೀಡಬಾರದೆಂದರು.ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವಾದರೆ ಚನ್ನಗಿರಿ ಸೇರಿದಂತೆ ದಾವಣಗೆರೆ ಜಿಲ್ಲೆಗೆ ಎಲ್ಲೆ ಬಂದರೂ ಕಿಸಾನ್ ಕಾಂಗ್ರೆಸ್ ಹಾಗೂ ರೈತರೊಂದಿಗೆ ಸೇರಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ ಎಂದು ಬಸವರಾಜು ವಿ ಶಿವಗಂಗಾ ಎಚ್ಚರಿಕೆ ನೀಡಿದ್ದಾರೆ. ಅಡಿಕೆ ಬೆಳೆ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಹೊಸ ಉತ್ಪನ್ನಗಳನ್ನ ಮಾಡುವಂತ ಯೋಜನೆಗಳನ್ನ ಸರ್ಕಾರ ರೂಪಿಸಿ ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು ಆದರೆ ಇಂಥ ಹೇಳಿಕೆ ನೀಡಿವುದು ಸರಿಯಲ್ಲ ಎಂದರು. ಕೂಡಲೇ ರೈತರ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಬಸವರಾಜು ವಿ ಶಿವಗಂಗಾ ಎಚ್ಚರಿಕೆ ನೀಡಿದ್ದಾರೆ.