ವಿಧಾನಸಭಾ ಚುನಾವಣೆ ಮತದಾನ ಹೆಚ್ಚಳದಲ್ಲಿ ಶ್ರಮಿಸಿದ ಬಿ.ಎಲ್.ಓ.ಗಳಿಗೆ ಜಿಲ್ಲಾ ಆಡಳಿತದಿಂದ ಅಭಿನಂದನೆ
ದಾವಣಗೆರೆ : ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಹೆಚ್ಚಿನ ಮತದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗಿಂತಲೂ ಮೇ 10, 2023 ರ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಶೇ20 ರಷ್ಟು ಮತದಾನ ಪ್ರಮಾಣ ಹೆಚ್ಚಿಸಿದ ಬಿಎಲ್‍ಓಗಳ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ 101 ಮತಗಟ್ಟೆಗಳಲ್ಲಿ ಶೇ 10 ಕ್ಕಿಂತ ಹೆಚ್ಚು ಮತದಾನವಾಗಿದ್ದು, ಮಾಯಕೊಂಡ ಕ್ಷೇತ್ರದ 1 ಮತಗಟ್ಟೆಯಲ್ಲಿ ಶೇ 45 ರಷ್ಟು ಮತದಾನ ಹೆಚ್ಚಾಗಿದೆ.
ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಸೇರ್ಪಡೆ ಹಾಗೂ ಮನೆಮನೆಗೂ ತೆರಳಿ ಮತದಾರರ ಚೀಟಿಯನ್ನು ತಲುಪಿಸಲು ಶ್ರಮಿಸಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಹಜವಾಗಿ ಹೆಚ್ಚಿನ ಮತದಾನವಾಗಿದ್ದು, ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡೆಮೆಯಾಗಿದೆ. ಮತದಾನ ಪಟ್ಟಿ ಪರಿಷ್ಕರಣಾ ಸಮಯದಲ್ಲಿ ಎರಡು ಕಡೆ ಪಟ್ಟಿಯಲ್ಲಿ ಹೆಸರು, ಮೃತರ ಹೆಸರು ಸೇರಿದಂತೆ 1 ಲಕ್ಷ ಜನ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿ, ವಿವಿಧ ರೀತಿಯ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಜಿಲ್ಲೆಯ ಮತದಾನ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಆದ ಮತದಾನ ಪ್ರಮಾಣಕ್ಕಿಂತ 10% ಮತದಾನ ಪ್ರಮಾಣವನ್ನು ಹೆಚ್ಚಿಸುವಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗುರಿ ನೀಡಲಾಗಿತ್ತು, ಅದರಂತೆ ಈ ಬಾರಿಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ಪ್ರಮಾಣ ಹೆಚ್ಚಿಗೆಯಾಗಿದೆ. ಮುಂಬರುವ ಚುನಾವಣೆಯಲ್ಲೂ ಸಹ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಬೇಕು ಎಂದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ, ಆರ್‍ಓ, ಎಆರ್‍ಓ ಹಾಗೂ ಮತಗಟ್ಟೆ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.