ಕ್ರೀಡಾಪಟುಗಳು ಪೌಷ್ಠಿಕಯುಕ್ತ ಮಿತಹಾರ ಸೇವಿಸಿದಾಗ ಮಾತ್ರ ಆರೋಗ್ಯ ಕಾಪಾಡಿ ಕೊಳ್ಳಬಹುದು – ಅಂತರಾಷ್ಟ್ರೀಯ ಕುಸ್ತಿಪಟು ಅರ್ಜುನ್ ಹಲಕುರ್ಕಿ
ದಾವಣಗೆರೆ: ಕ್ರೀಡಾಪಟುಗಳು ಪೌಷ್ಠಿಕಯುಕ್ತ ಮಿತಹಾರ ಸೇವಿಸಿದಾಗ ಮಾತ್ರ ಆರೋಗ್ಯ ಕಾಪಾಡಿ ಕೊಳ್ಳಬಹುದೆಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ, ಅಂತರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಅರ್ಜುನ್ ಹಲಕುರ್ಕಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅನುವಾಗುತ್ತದೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಪೌಷ್ಠಿಕ ಆಹಾರ ಸೇವನೆ. ಮಿತಹಾರ ಸೇವನೆ ಮುಖ್ಯ ಎಂದು ತಿಳಿಸಿದರು.
ಕಳೆದ ೧೦ ವರ್ಷಗಳ ಹಿಂದೆ ದಾವಣಗೆರೆಯ ಕ್ರೀಡಾ ವಸತಿ ನಿಲಯದಲ್ಲಿ ಕುಸ್ತಿ ಕೋಚ್ ಶಿವಾನಂದ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದೆ. ಪೊಲೀಸ್ ತಂಡ ಕೂಡ ನನಗೆ ಸಹಕಾರ ನೀಡಿತ್ತು. ದಾವಣಗೆರೆಯ ಎಲ್ಲಾ ತರಬೇತುದಾರರು, ವಸತಿ ನಿಲಯದ ಕ್ರೀಡಾಪಟುಗಳು, ಜನರ ಸಹಕಾರದಿಂದ ತಾವು ಕುಸ್ತಿಯಲ್ಲಿ ಸಾಧನೆಗೈದಿದ್ದು, ಮುಂಬರುವ ೨೦೨೪ರಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಒಲಂಪಿಕ್‌ನಲ್ಲಿ ತಾವು ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಪ್ರತಿವರ್ಷ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದ್ದು, ಇಲ್ಲಿ ಗೆಲುವು ಸಾಧಿಸಿದ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಅಲ್ಲಿ ಜಯಗಳಿಸಿದರೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಪೊಲೀಸ್ ಅಧೀಕ್ಷಕ ಎಂ.ರಾಜೀವ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಡಿಎಆರ್ ತಂಡದ ನಾಯಕ ಸಂಗಮೇಶ ಇಂಗಳಗೇರಿ, ದಾವಣಗೆರೆ ನಗರ ಉಪ ವಿಭಾಗ ತಂಡದ ನಾಯಕ ರವೀಂದ್ರ ಕಾಳಭೈರವ, ಗ್ರಾಮಾಂತರ ಉಪ ವಿಭಾಗದ ಕಾಂತರಾಜು ತಂಡ, ಚನ್ನಗಿರಿ ಉಪ ವಿಭಾಗದ ಬಸವರಾಜ ಬೀರಾದಾರ ತಂಡ, ಡಿಪಿಓ ವಿಶೇಷ ಘಟಕದ ಸಂಜೀವಕುಮಾರ ತಂಡ, ಮಹಿಳಾ ತಂಡದ ಶೀಲಾ ಹೊಂಗಲ್ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಕ್ರೀಡಾ ಜ್ಯೋತಿ ತಂದ ಚಾಂಪಿಯನ್ ಎ.ಪಿ.ಜಯಣ್ಣ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ರಾಜೀವ್ ವಂದಿಸಿದರು. ಸಿಬ್ಬಂದಿಗಳಾದ ಪೊಲೀಸ್ ಕೆ.ಸಿ.ಶೈಲಜ, ದೇವರಾಜ ಸಂಗೇನಹಳ್ಳಿ ನಿರೂಪಿಸಿದರು.