ಹಿಜಾಬ್ ಪರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿ ಸಹೋದರನ ಮೇಲೆ ಹಲ್ಲೆ ಬಲಪಂಥೀಯ ಬೆಂಬಲಿಗರ ಗುಂಪಿನ ವಿರುದ್ಧ ವಿದ್ಯಾರ್ಥಿ ಶಿಫಾ ಆರೋಪ
ಉಡುಪಿ: ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಹಿಜಾಬ್-ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಶಾಲಾ-ಕಾಲೇಜುಗಳ ತರಗತಿಯಲ್ಲಿ ಹಿಜಾಬ್ ನಿಷೇಧಿಸಿರುವ ಸರ್ಕಾರದ ಕಾನೂನನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೊಬ್ಬರ ಕುಟುಂಬಸ್ಥರ ಮೇಲೆ ಬಲಪಂಥೀಯ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಹಿಜಾಬ್ ಪ್ರಕರಣ ಕುರಿತು ಸಲ್ಲಿಸಿರುವ ಅರ್ಜಿದಾದರರಲ್ಲಿ ಒಬ್ಬರಾಗಿರುವ ಮಲ್ಪೆ ಮೂಲದ ಹಜ್ರಾ ಶಿಫಾ ಎಂಬುವವರ ಸಹೋದರಾರದ ಸೈಫ್ (20) ಅವರ ಮೇಲೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಸಂಘ ಪರಿವಾರಕ್ಕೆ ಸೇರಿರುವ ಗುಂಪೊಂದು ಮಲ್ಪೆ ಬಂದರಿನಲ್ಲಿರುವ ಬಿಸ್ಮಿಲ್ಲಾ ಹೋಟೆಲ್‌ನಲ್ಲಿ ಹಲ್ಲೆ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಬಿಸ್ಮಿಲ್ಲಾ ಹೋಟೆಲ್ ಮೇಲೆಯೂ ಕಲ್ಲು ತೂರಾಟ ಮಾಡಿದ್ದು, ರೆಸ್ಟೋರೆಂಟ್‌ನ ಕಿಟಕಿ ಗಾಜುಗಳು ಜಖಂಗೊಂಡಿದೆ. ಈ ವೇಳೆ ನೆರೆದಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಬೇಕಾಯಿತು.
ಇದೀಗ ವಿದ್ಯಾರ್ಥಿನಿ ಶಿಫಾ ಅವರ ಸಹೋದರ ಸೈಫ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಚೆನ್ನಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಹಜ್ರಾ ಶಿಫಾ ಅವರು ತಮ್ಮ ಟ್ವಿಟರ್ ನಲ್ಲಿ “ನಾನು ನನ್ನ ಹಕ್ಕಾದ ಹಿಜಾಬ್‌ಗಾಗಿ ನನ್ನ ಹೋರಾಟ ಮುಂದುವರೆಸುತ್ತಿರುವುದಕ್ಕಾಗಿ ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ನಮ್ಮ ಆಸ್ತಿಯೂ ಹಾಳಾಗಿದೆ. ಯಾಕೆ? ನನ್ನ ಹಕ್ಕನ್ನು ನಾನು ಕೇಳಬಾರದೆ? ಅವರ ಮುಂದಿನ ಬಲಿಪಶು ಯಾರು? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಪೊಲೀಸರಲ್ಲಿ ನಾನು ಆಗ್ರಹಿಸುತ್ತೇನೆ” ಎಂದು ಟ್ವಿಟ್ಟಿಸಿದ್ದಾರೆ.
====