NPS: ಎನ್ ಪಿ ಎಸ್ ಯೋಜನೆ ರದ್ಧುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಿ : ಸಿಎಂ ಗೆ ಪತ್ರ ಬರೆದ ಸಭಾಪತಿ ಬಸವರಾಜ ಎಸ್. ಹೊರಟ್ಟಿ

ಬೆಂಗಳೂರು: ನೂತನ ಪಿಂಚಣಿ ಯೋಜನೆಯನ್ನು ರದ್ಧುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಈಗಾಗಲೇ ಸರ್ಕಾರಿ ನೌಕರರು ಹಲವಾರು ಹೋರಾಟಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಲೇ ಇದ್ದಾರೆ.
ಈಗ ಹೊಸ (ಎನ್ ಪಿಎಸ್ ) ಯೋಜನೆ ರದ್ಧುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಸಹ ಸಿಎಂ ಬಸವರಾಜ್ ಬೊಮ್ಮಾಯಿ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಅಂದರೆ 2006 ರ ಏಪ್ರೀಲ್ 1 ರ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಗೊಂಡ ಸುಮಾರು 2 ಲಕ್ಷಕ್ಕೂ ಅಧಿಕ ನೌಕರರು ಈ ನಿಶ್ಚಿತ ಪಿಂಚಣಿ ಯೋಜನೆಯಿಂದ ವಂಚಿತಗೊಂಡಿದ್ದಾರೆ.
ನಿಶ್ಚಿತ ಪಿಂಚಣಿ ಯೋಜನೆಯು ನಿವೃತ್ತಿ ಹೊಂದಿದ ತರುವಾಯ ವೃದ್ಧಾಪ್ಯದಲ್ಲಿ ಜೀವನ ನಡೆಸಲು ಅನುಕೂಲವಾಗಲಿದ್ದು, ಅಂದಿನ ಸರ್ಕಾರ ಈ ಯೋಜನೆಯಿಂದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ರದ್ಧುಪಡಿಸಿತ್ತು. ಆದರೆ, ನೌಕರರು ಸರ್ಕಾರದ ಈ ನಿರ್ಧಾರವನ್ನು ಸುತಾರಂ ಒಪ್ಪದೇ ಅಂದಿನಿಂದಲೇ ಹೋರಾಟಕ್ಕೆ ಇಳಿದಿದ್ದರು.
ಸರ್ಕಾರಿ ನೌಕರರಾಗಿ ಹೊಸದಾಗಿ ಸೇವೆಗೆ ನೇಮಕಗೊಂಡ 2 ಲಕ್ಷಕ್ಕೂ ಅಧಿಕ ನೌಕರರು ನಿಶ್ಚಿತ ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದು, ಹಲವಾರು ನೌಕರರು ನಿವೃತ್ತರಾಗಿದ್ದಾರೆ, ಅವರಿಗೆ ಕನಿಷ್ಠ ಪಿಂಚಣಿ ಸಿಗುತ್ತಿದ್ದು, ನಿವೃತ್ತ ನೌಕರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದ್ದರಿಂದ, ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಕೊಡುವ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಿ 3 ತಿಂಗಳೊಳಗಾಗಿ ಅಧಿಕಾರಿಗಳ ಸಮಿತಿಯಿಂದ ವರದಿಯನ್ನು ಪಡೆದು ಮುಂಬರುವ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡುವಂತೆ ಹೊರಟ್ಟಿ ಸಿಎಂಗೆ ಕೋರಿದ್ದಾರೆ.

 
                         
                       
                       
                       
                      