ನಿರಂತರ ಜ್ಯೋತಿಯಡಿಯಲ್ಲಿನ ಭ್ರಷ್ಟಾಚಾರ ಸಿಬಿಐ ತನಿಖೆಗೆ ಒಳಪಡಿಸಲು ಆಗ್ರಹ!

ದಾವಣಗೆರೆ : ಸರ್ಕಾರದ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಹೊಸಬೆಳಕು, ದೀನದಯಾಳು ಯೋಜನೆಯಡಿಯಲ್ಲಿ ಬಡ ಕುಟುಂಬಗಳ ಮತ್ತು ಸಾರ್ವಜನಿಕರ ವಿದ್ಯುತ್ ಬಳಕೆ ಬಾಕಿ ವಸೂಲಾತಿ ಕೈಬಿಡಲು ಹಾಗೂ ನಿರಂತರ ಜ್ಯೋತಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸಿಬಿಐ ತನಿಖೆಗೆ ಒಳಪಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಹರಿಹರ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಸರ್ಕಾರ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಹೊಸಬೆಳಕು, ದೀನದಯಾಳು ಯೋಜನೆಯಡಿಯಲ್ಲಿ ಹಲವಾರು ವರ್ಷಗಳಿಂದ ಬಡ ಕೂಲಿಕಾರರ ವಸತಿ ಮನೆಗಳಿಗೆ ವಿದ್ಯುತ್ ಕಲ್ಪಿಸಿಕೊಟ್ಟಿದ್ದು, ಇತ್ತೀಚಿಗೆ ರಾಜ್ಯ ಸರ್ಕಾರ ಶೇ.70ರಷ್ಟು ಪ್ರತಿ ಯೂನಿಟ್‌ಗೆ ರಿಯಾಯ್ತಿ ನೀಡಲಾಗಿರುತ್ತದೆ ಎಂದು ಆಶ್ವಾಸನೆ ನೀಡಿದೆ. ಆದರೆ ಬೆಸ್ಕಾಂ ಕಂಪನಿಯ ಕೆಲ ಅಧಿಕಾರಿಗಳು ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಸುಮಾರು 29 ಕೋಟಿ ಹಣವನ್ನು ಹರಿಹರ ಉಪವಿಭಾಗ ವ್ಯಾಪ್ತಿಗೆ ಬರುವ ಹರಿಹರ, ಹರಪನಹಳ್ಳಿ, ತೆಲಗಿ, ಹೊನ್ನಾಳಿ ಮತ್ತು ನ್ಯಾಮತಿ ಭಾಗದಲ್ಲಿ ನಿರಂತರ ಜ್ಯೋತಿ ಎಂಬ ಯೋಜನೆಯಡಿಯಲ್ಲಿ ಸುಮಾರು ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಿಕೊಂಡಿದೆ.

ಇದರ ಬಗ್ಗೆ ದೂರು ಸಲ್ಲಿಸಿದರು ಸಹ ನೆಪ ಮಾತ್ರಕ್ಕೆ ತನಿಖೆ ಮಾಡಿಸಿ, ಮುಚ್ಚಾಕುವ ಪ್ರಯತ್ನ ಮಾಡಿರುತ್ತಾರೆ.ಇಂಧನ ಸಚಿವ ವಿ. ಸುನೀಲ್ ಕುಮಾರ್ ನೆಪ ಮಾತ್ರಕ್ಕೆ ಎಳೆಹೊಳೆ ಮತ್ತು ಹಿಂಡಸಘಟ್ಟ ಫೀಡರ್‌ಗಳನ್ನು ತನಿಖೆ ಮಾಡಿಸಿ 2 ಫೀಡರ್‌ನಲ್ಲಿ ವ್ಯತ್ಯಾಸ ಆಗಿದೆ ಎಂದು ವರದಿ ಕೂಡ ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೂ ಇನ್ನುಳಿದ 29 ಫೀಡರ್‌ಗಳಲ್ಲಿ ತನಿಖೆ ಮಾಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ತವ್ಯದಲ್ಲಿ ಲೋಪ ಕಂಡುಬ0ದ ಅಧಿಕಾರಿಗಳನ್ನು ವೃತ್ತಿಯಿಂದ ವಜಾ ಮಾಡದೆ ಕೇವಲ ವರ್ಗಾವಣೆ ಮಾಡಿರುತ್ತಾರೆ. ಇಂಧನ ಸಚಿವರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದರೂ ಮೇಲ್ನೋಟಕ್ಕೆ ತನಿಖಾ ತಂಡವನ್ನು ರಚನೆ ಮಾಡಿ 15 ದಿನಗಳೊಳಗಾಗಿ ಸಮಗ್ರ ತನಿಖೆ ಕೈಗೊಳ್ಳುತ್ತೆನೆಂದು ಆಶ್ವಾಸನೆ ನೀಡಿ ಪ್ರಕರಣ ಮುಚ್ಚಿ ಹಾಕಿದ್ದಾರೆ.
ನಿರಂತರ ಜ್ಯೋತಿ ಯೋಜನೆಯಲ್ಲಿ ನಡೆದ ಹಗರಣದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು, ರಾಜ್ಯಾದ್ಯಂತ ಈ ಯೋಜನೆಯಲ್ಲಿ ನಡೆದಿರುವ ಹಗರಣ ಕುರಿತು ಸಿಬಿಐ ತನಿಖೆಗೆ ಒಳಪಡಿಸಬೇಕು ಮತ್ತು ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಮಹೇಶ್, ಜಿಲ್ಲಾಧ್ಯಕ್ಷ ಮಲ್ಲಾಪುರ ದೇವರಾಜ್ ಒತ್ತಾಯಿಸಿದ್ದಾರೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!