ಚನ್ನಗಿರಿ ತಾಲ್ಲೂಕಿನಲ್ಲಿದೆ 800 ವರ್ಷದ ಪುರಾತನ ದೇವಸ್ಥಾನ.! ಜೀರ್ಣೋದ್ಧಾರಕ್ಕೆ ಇಚ್ಚಾ ಶಕ್ತಿಯ ಕೊರತೆ
ದಾವಣಗೆರೆ: ಚನ್ನಗಿರಿ ತಾಲ್ಲೂಕು ಹಳೇ ಮಲ್ಲಿಗೆರೆ ಗ್ರಾಮದಲ್ಲಿರುವ ಈಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಂತೆ ಮಲ್ಲಿಗೆರೆ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಂದ ಹಾಗೆ ಹಳೇ ಮಲ್ಲಿಗೆರೆ ಗ್ರಾಮದಲ್ಲಿರುವ ಈ ದೇವಸ್ಥಾನ ಸುಮಾರು 800 ವರ್ಷಗಳಷ್ಟು ಹಳೆಯದು ಎಂಬ ಮಾಹಿತಿ ಇದೆ. ಈಶ್ವರ ದೇವಾಲಯ ಹಾಗೂ ಮಾಸ್ತೆಮ್ಮನ ದೇವಾಲಯಗಳು ಇಲ್ಲಿವೆ.
ಹಿಂದೂ ಪರಂಪರೆಯಲ್ಲಿ ದೇವಾಲಯಗಳಿಗೆ ಪೂಜನೀಯ ಸ್ಥಾನವಿದೆ. ದೇಗುಲಗಳು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು. ಆದರೆ, ಕೆಲವು ಕಿಡಿಗೇಡಿಗಳು ನಿಧಿ, ಆಸ್ತಿ ಆಸೆಗಾಗಿ ದೇವಾಲಯಗಳ ಮೇಲೆ ತಮ್ಮ ವಕ್ರದೃಷ್ಟಿ ಬಿರುತ್ತಿದ್ದಾರೆ.
ಇಲ್ಲಿಯೂ ಸಹ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ದ್ವಂಸ ಮಾಡಿದ ಘಟನೆ ನಡೆದಿದೆ. ಈ ದೇವಾಲಯವು ಪುರಾತನ ಕಾಲದ್ದಾಗಿದೆ. ಇಲ್ಲಿನ ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ಇಲ್ಲಿನ ಆಕರ್ಷಣೆಯ ಕೇಂದ್ರವಾಗಿತ್ತು.
ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ತುಂಬಾ ವಿರಳವಾಗಿತ್ತು. ಹೀಗಾಗಿ ಈ ಪುರಾತನ ದೇಗುಲದ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ದೇವಸ್ಥಾನದ ಅರ್ಚಕ ತಿಪ್ಪೇಸ್ವಾಮಿ ಎಂಬುವವರು, ದೇವಸ್ಥಾದ ಜೀರ್ಣೋದ್ಧಾರ ಹಾಗೂ ಅರ್ಚಕರ ಮಾಸಾಶನ ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ದೇವಸ್ಥಾನ ಮುಜರಾಯಿ ದೇವಸ್ಥಾನವಲ್ಲ ಎಂಬ ಕಾರಣ ನೀಡಿ ಅವರ ಅರ್ಜಿ ವಿಲೇ ಮಾಡಲಾಗಿದೆ.
ಇಲ್ಲಿನ ಅರ್ಚಕರ ಪ್ರಕಾರ, ಶ್ರೀ ಆಂಜನೇಯ, ಮೈಲಾರಲಿಂಗಪ್ಪ ಹಾಗೂ ಮಾಸ್ತೆಮ್ಮ ಈ ಮೂರು ದೇವಸ್ಥಾನಗಳಿಗೆ ಸುರಂಗ ಮಾರ್ಗ ಸಂಪರ್ಕ, ಕೋಟೆಯೂ ಸಹ ಇದೆ. ಈ ದೇವಸ್ತಾನಗಳಿಗೆ ಸಂಬಂಧಪಟ್ಟ ಆಸ್ತಿ ಒಡವೆ, ಹಾಗೂ ನಿಧಿ ಇತ್ತು ಎನ್ನಲಾಗಿದೆ.
ಇಲ್ಲಿ ಸುಮಾರು 10 ರಿಂದ 15 ಮನೆಗಳಿದ್ದವು ಎನ್ನಲಾಗಿದ್ದು, ಸುಮಾರು 1963 ರಲ್ಲಿ ಆಕಸ್ಮಿಕ ಬೆಂಕಿಗೆ ಸಿಲುಕಿ ಮನೆಗಳು ಸುಟ್ಟುಹೋಗಿದ್ದು ಮತ್ತೆ ಇಲ್ಲಿ ಯಾರು ಮನೆಗಳ ನಿರ್ಮಾಣಕ್ಕೆ ಮುಂದಾಗದೆ ಇರುವುದರಿಂದ ಇಲ್ಲಿ ನಿರ್ಜನ ಪ್ರದೇಶವಾಗಿರುವುದನ್ನೇ ಬಂಡವಾಳ ಮಾಡಿಕೊಂಡು ದೇವಸ್ಥಾನಗಳನ್ನು ಜೀರ್ಣೋದ್ದರ ಮಾಡುವ ಬದಲು ಅಲ್ಲಿನ ನಿಧಿ, ಆಸ್ತಿ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂಬುದು ಅವರ ಅಭಿಪ್ರಾಯ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಬೇಕಿದೆ