ಶ್ರೀ ಅನ್ನದಾನೇಶ್ವರ ಮಠದಲ್ಲಿ 266ನೇ ಶಿವಾನುಭವ ಸಂಪದ. ಉಚಿತ ಆಕ್ಸಿಜನ್ ಕೊಡುವ ಗಿಡಮರಗಳನ್ನು ಬೆಳೆಸಿ: ಡಾ. ವೀರೇಶ್

ಶ್ರೀ ಅನ್ನದಾನೇಶ್ವರ ಮಠ

ದಾವಣಗೆರೆ- ಮಾ-1: ಪರಿಸರ ಅಂದಾಕ್ಷಣ ನೆನಪಾಗುವುದು ಬರೀ ಗುಡ್ಡ- ಬೆಟ್ಟ, ಅಲ್ಲಿರುವ ಗಿಡ- ಮರಗಳು ಅಷ್ಟೇ ಅಲ್ಲ ನಮ್ಮ ಸುತ್ತಲೂ ಇರುವ ವಿವಿಧ ಕ್ಷೇತ್ರಗಳ ವಾತಾವರಣವು ಚೆನ್ನಾಗಿರಬೇಕು ಎಂದು ಯುವ ವಿಜ್ಞಾನಿ, ದಾವಣಗೆರೆ ವಿಶ್ವವಿದ್ಯಾಲಯದ ಪರಿಸರ ಮತ್ತು ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೀರೇಶ್ ಎಸ್. ಜೆ. ಅವರು ನುಡಿದರು.
ಅವರು ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಏರ್ಪಡಿಸಿದ್ದ 266ನೇ ಶಿವಾನುಭವ ಸಂಪದದಲ್ಲಿ ಉಪನ್ಯಾಸ ನೀಡುತ್ತಾ ಶಿಕ್ಷಣ ಕ್ಷೇತ್ರ, ಮಠದ ಪರಿಸರ ಮನುಷ್ಯನನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತದೆ ಎಂದರು.
ಪೊಲೀಸ್ ಠಾಣೆ, ಕೋರ್ಟ್ ಆಸ್ಪತ್ರೆಗಳೂ ಸಹ ಪರಿಸರದ ವ್ಯಾಪ್ತಿಯಲ್ಲಿ ಬರುತ್ತವೆ. ಬರೀ ಪಾಠ ಓದಿದರೆ ಸಾಲದು, ಅದರ ತಿರುಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಕೃತಿಯಲ್ಲಿ ಜಾರಿಗೆ ತಂದಾಗ ಮಾತ್ರ ಮನುಷ್ಯರ ಜೀವನ ಸಾರ್ಥಕವಾಗುತ್ತದೆ. ಪರಿಸರಕ್ಕೂ ಬಸವಣ್ಣನವರ ವಚನಗಳಿಗೂ ಸಾಮ್ಯತೆ ಇದೆ ಎಂದು ನುಡಿದು ಪ್ರಕೃತಿಯ ಸೂಕ್ಷ್ಮಾಣು ಜೀವಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದರು.
ಹಣದಿಂದ ವಸ್ತುಗಳನ್ನು ಖರೀದಿಸಬಹುದು. ಆದರೆ ಪರಿಸರದಲ್ಲಿ ಗಿಡಮರಗಳು ಕೊಡುವ ಆಕ್ಸಿಜನ್ ನಿಂದ ಸಮಾಜ ಆರೋಗ್ಯವಾಗಿರುತ್ತದೆ, ಪ್ಲಾಸ್ಟಿಕ್ ನಂತಹ ವಿಷದ ವಸ್ತುಗಳನ್ನು ಬೆಂಕಿಯಲ್ಲಿ ಸುಡಬೇಡಿ. ಅದರಿಂದ ಕ್ಯಾನ್ಸರ್ ರೋಗ ಉಲ್ಬಣವಾಗುತ್ತದೆ, ಆಗ ಆಸ್ಪತ್ರೆಗೆ ಹೋಗಿ ಆಕ್ಸಿಜನ್ ಖರೀದಿಸುತ್ತೇವೆ. ಇದರ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಬೇಕು ಎಂದರು.
ಸುಸ್ಥಿರ ಪರಿಸರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಸೂರ್ಯನ ಕಿರಣಗಳು ಕೇವಲ 2 ರಷ್ಟು ಮಾತ್ರ ಭೂಮಿಗೆ ಬರುತ್ತದೆ. ಇದು ಹೆಚ್ಚಾದರೆ, ಸಾವು- ನೋವುಗಳು ಹೆಚ್ಚಾಗುತ್ತವೆ. ಸೂರ್ಯನು ಸುತ್ತಲೂ ಇರುವ ಓಝೋನ್ ಪದರ ಕೆಲಸ ಮಾಡದಿದ್ದರೆ,ಲೋಕ ಅಲ್ಲೋಲ ಕಲ್ಲೋಲವಾಗುತ್ತದೆ, ಆದ್ದರಿಂದ ಮನುಷ್ಯರಾದ ನಾವು ವಾಯುಮಾಲಿನ್ಯವನ್ನು ತಡೆಯಬೇಕು. ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ಸದಾ ಜಾಗೃತರಾಗಿರಬೇಕೆಂದು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರು ಆಶೀರ್ವಚನ ನೀಡುತ್ತ ಅನುರೇಣು ತೃಣಕಾಷ್ಟ, ಎಂಬಂತೆ ಎಲ್ಲದರಲ್ಲಿಯೂ ಶಿವನ ಅನುಭವ ಹೊಂದಬೇಕು. ಪರಿಸರ ಮತ್ತು ವಿಜ್ಞಾನದ ತಿಳುವಳಿಕೆ ಅರಿತಿರಬೇಕು. ಒತ್ತಡದ ಜೀವನ ಶೈಲಿಯಲ್ಲಿಯೂ ಮನುಷ್ಯ ಪರಿಸರಕ್ಕೆ ಹೆಚ್ಚು ಕಾಳಜಿ ತೋರಿಸಬೇಕೆಂದರು.
ಲಿಂ. ಶ್ರೀಮತಿ ಗೌರಮ್ಮ ಲಿಂ.ಕೆ. ತಿಪ್ಪಣ್ಣನವರ ಸ್ಮರಣಾರ್ಥ ಅವರ ಪುತ್ರ ಕೆ.ಟಿ. ಮಹಾಲಿಂಗಪ್ಪ ಶ್ರೀಮತಿ ಶೈಲ ಇವರು ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.
ಆರಂಭದಲ್ಲಿ ಟಿ .ಹೆಚ್. ಎಂ. ಶಿವಕುಮಾರ ಸ್ವಾಮಿ ಅವರು ಪ್ರಾರ್ಥಿಸಿದರು. ನಂತರ ಇಂದಿನ ಸುದ್ದಿ ಸಂಪಾದಕ ವೀರಪ್ಪ .ಎಂ. ಭಾವಿ ಸ್ವಾಗತಿಸಿದರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಹಶಿಕ್ಷಕಿ ಶ್ರೀಮತಿ ತನುಜ ವಿ.ಬಿ. ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಸುಜಾತ ಅಂತ್ಯದಲ್ಲಿ ವಂದಿಸಿದರು. ವೇದಿಕೆಯ ಮೇಲೆ ಶ್ರೀ ವಿಶ್ವೇಶ್ವರ ದೇವರು, ಕಾರ್ಯದರ್ಶಿ ಎನ್. ಅಡಿವೆಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!