ಕ್ವಾರಂಟೈನ್ ಕಡ್ಡಾಯ ನಿಯಮ ತೆಗೆದು ಹಾಕಿದ ಚೀನಾ

ಬೀಜಿಂಗ್: ಚೀನಾದಲ್ಲಿ ಕಳೆದ ಮೂರು ವರ್ಷಗಳಿಂದ ಇದ್ದಂತಹ ಕ್ವಾರಂಟೈನ್ ಕಡ್ಡಾಯ ನಿಯಮವನ್ನು ಭಾನುವಾರದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ದೇಶಕ್ಕೆ ಬರಲು ಕಾತರವಾಗಿದ್ದ ಸಾವಿರಾರು ಮಂದಿ ತಾಯ್ನಾಡಿಗೆ ಆಗಮಿಸಿ ಸಂಭ್ರಮಿಸಿದ್ದಾರೆ.
ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಕೋವಿಡ್ ವ್ಯಾಪಿಸಿರುವುದರಿಂದ ಹಲವು ದೇಶಗಳು ಚೀನಾದಿಂದ ಬರುವ ಜನರಿಗೆ ನಿರ್ಬಂಧ ಹೇರಿದ ಸಂದರ್ಭದಲ್ಲೇ ಚೀನಾದಿಂದ ಈ ಪ್ರಯಾಣ ನಿರ್ಬಂಧ ತೆರವು ಘೋಷಣೆಯಾಗಿದೆ.
ಭಾನುವಾರ ನಸುಕಿನಲ್ಲಿ ಟೊರೆಂಟೊ ಮತ್ತು ಸಿಂಗಪುರದಿಂದ ಬಂದ, 387 ಪ್ರಯಾಣಿಕರಿದ್ದ ಎರಡು ವಿಮಾನಗಳು ದಕ್ಷಿಣ ಗ್ವಾಂಗ್‌ಡಂಗ್ ಪ್ರಾಂತ್ಯದ ಗ್ವಾಂಗ್‌ಝೌ ಮತ್ತುಇ ಶೆಂಝೆನ್ ವಿಮಾನನಿಲ್ದಾಣಗಳಲ್ಲಿ ಬಂದಿಳಿದವು ಎಂದು ಸರ್ಕಾರಿ ಸ್ವಾಮ್ಯದ ಸಿಜಿಟಿಎನ್ ಟಿವಿ ವರದಿ ಮಾಡಿದೆ. ಬೀಜಿಂಗ್, ಟಿಯಾಂಜಿನ್, ಕ್ಷಿಯಾಮಿನ್‌ಗಳ ವಿಮಾನನಿಲ್ದಾಣಗಳಲ್ಲಿ ಸಹ ಪ್ರಯಾಣಿಕರ ದೊಡ್ಡ ಸರದಿ ಕಂಡುಬಂತು.
ಹಾಂಕಾಂಗ್‌ನಿಂದ ಸಹ ಚೀನಾಕ್ಕೆ ಪ್ರಯಾಣವನ್ನು ಮುಕ್ತಗೊಳಿಸಲಾಗಿದೆ. ಚೀನಾದ ಇತರ ಗಡಿಗಳಲ್ಲಿ ಸಹ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.