ದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಸಿದ್ದರಾಮಯ್ಯ ಅವರು ಗಡ್ಕರಿ ಅವರ ಗಮನ ಸೆಳೆದರು. ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ಹೆದ್ದಾರಿ ವೀಕ್ಷಣೆಗೆ ಕಳುಹಿಸಿ ಲೋಪ ದೋಷ ಸರಿಪಡಿಸುವುದಾಗಿ ಗಡ್ಕರಿ ಅವರು ತಿಳಿಸಿದರು. ಶಿರಾಡಿ ಘಾಟ ಸುರಂಗ ಮಾರ್ಗ ಕುರಿತಾಗಿಯೂ ಮುಖ್ಯಮಂತ್ರಿಗಳು ಸಚಿವರೊಂದಿಗೆ ಮಾತುಕತೆ ನಡೆಸಿದರು.
ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಹಾಜರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಜರಿದ್ದರು.
