ಸಿ ಎಂ ಬಿ ಎಸ್ ಯಡಿಯೂರಪ್ಪರ ಬೆಂಬಲಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಇದೆ – ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಸಿಎಂ ಕುರ್ಚಿಗಾಗಿ ನಡೆದಿರುವ ಚರ್ಚೆ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.
ನಗರದ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬಿ.ಎಸ್. ಯಡಿಯೂರಪ್ಪಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಬೆಂಬಲ ಯಾವಾಗಲು ಇರುತ್ತದೆ. ಈಗ ಕೊರೊನಾ ಇದೆ, ಯಡಿಯೂರಪ್ಪನವರನ್ನು ಬದಲಾಯಿಸುವ ಪರಿಸ್ಥಿತಿ ಇಲ್ಲ. ಈಗಾಗಲೇ ಸ್ವಾಮೀಜಿಗಳು ಸಹ ಈ ಬಗ್ಗೆ ಮಾತಾಡಿದ್ದಾರೆ. ಇದರ ಜೊತೆಗೆ ವೀರಶೈವ ಮಹಾಸಭಾ ಕೂಡ ಯಡಿಯೂರಪ್ಪ ಅವರ ಜೊತೆಗಿದೆ, ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾದ ನಡುವೆಯೇ ಸಿಎಂ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬೆಂಬಲ ಸೂಚಿಸಿರುವುದು ಸಿಎಂಗೆ ಬಲಬಂದಂತಾಗಿದೆ. ಅಲ್ಲದೇ ರಾಜಕೀಯ ಕುತುಹೂಲಕ್ಕೂ ಕಾರಣವಾಗಿದೆ. ಯಡಿಯೂರಪ್ಪ ಸಿಎಂ ಕುರ್ಚಿ ಕೆಡವಲು ಸ್ವಪಕ್ಷದವರು ಚರ್ಚೆ ಹುಟ್ಟುಹಾಕಿದ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವುದು, ಇತರರಿಗೆ ನುಂಗಲಾರದ ತುತ್ತಾಗಿದೆ.