ನೀತಿ ಸಂಹಿತೆ ಇಂದಿನಿಂದಲೇ ಜಾರಿ; ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ ರೂ.95 ಲಕ್ಷ ಮಿತಿ; ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ

ದಾವಣಗೆರೆ; ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ನಂ.13 ರ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದ ಎರಡನೇ ಹಂತದಲ್ಲಿ ನಡೆಯಲಿದ್ದು ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಮಾತನಾಡಿದರು. ಲೋಕಸಭಾ ಚುನಾವಣೆಯು ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ದೇಶದ ಎರಡನೇ ಹಾಗೂ ಮೂರನೇ ಹಂತದಲ್ಲಿ ಇಲ್ಲಿನ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿ ನಡೆಯುವ ಹಂತದನ್ವಯ ಎರಡನೇ ಹಂತದಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ನಡೆಯಲಿದೆ.

ಏಪ್ರಿಲ್ 12 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ಏ.19 ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ.22 ಕೊನೆಯ ದಿನವಾಗಿರುತ್ತದೆ. ಮತದಾನವು ಮೇ 7 ರಂದು ನಡೆಯಲಿದೆ. ಮತ ಎಣಿಕೆಯು ಜೂನ್ 4 ರಂದು ದಾವಣಗೆರೆ ವಿ.ವಿ. ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಭಾಂಗಣವನ್ನು ಚುನಾವಣಾಧಿಕಾರಿಗಳ ಕಚೇರಿಯನ್ನಾಗಿ ಮಾಡಲಾಗಿದ್ದು ಇಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ ರೂ.25 ಸಾವಿರ ಹಾಗೂ ಪ.ಜಾ, ಪ.ಪಂಗಡ ಅಭ್ಯರ್ಥಿಯಾಗಿದ್ದಲ್ಲಿ ರೂ.12500 ಠೇವಣಿ ಸಲ್ಲಿಸಬೇಕು, ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ ರೂ.95 ಲಕ್ಷ ಮಿತಿ ಇದೆ.

ಮತಗಟ್ಟೆಗಳ ವಿವರ; ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1946 ಮತಗಟ್ಟೆಗಳು ಬರುತ್ತವೆ. ಇದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1693 ಮತಗಟ್ಟೆಗಳಿವೆ.
ಮತದಾರರು; ಕ್ಷೇತ್ರವ್ಯಾಪ್ತಿಯಲ್ಲಿ ಹರಪನಹಳ್ಳಿ ಸೇರಿದಂತೆ ಪುರುಷ 838705, ಮಹಿಳಾ 840340, ಇತರೆ 136 ಹಾಗೂ 565 ಸೇವಾ ಮತದಾರರು ಸೇರಿ 16,79,746 ಮತದಾರರಿದ್ದಾರೆ. ವಿಧಾನಸಭಾ ಚುನಾವಣಾ ನಂತರ 2024 ರ ಜನವರಿ 1 ಕ್ಕೆ 18 ವರ್ಷ ತುಂಬುವವ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು 19507 ಪುರುಷ, 17339 ಮಹಿಳಾ, 3 ಇತರೆ ಸೇರಿ 36849 ಹೊಸ ಯುವ ಮತದಾರರು ಪಟ್ಟಿಯಲ್ಲಿ ನೊಂದಾಯಿಸಿದ್ದಾರೆ. ಏಪ್ರಿಲ್ 9 ರ ವರೆಗೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇದ್ದು ಆನ್‍ಲೈನ್ ಮೂಲಕ, ಅಥವಾ ಬಿ.ಎಲ್.ಓ ಮೂಲಕ ನೊಂದಾಯಿಸಿ ಯುವ ಮತದಾರರಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ ಎಂದರು.
ರಾಜಕೀಯ ಜಾಹಿರಾತು ತೆರವು; ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಯಲ್ಲಿದ್ದು ಜೂನ್ 6 ರವರೆಗೆ ಜಾರಿಯಲ್ಲಿರುತ್ತದೆ. ಈಗಾಗಲೇ ರಾಜಕೀಯ ಪ್ರೇರಿತ ಪ್ಲೆಕ್ಸ್, ಬಂಟಿಂಗ್ಸ್, ಪೋಸ್ಟರ್, ಕರಪತ್ರಗಳನ್ನು ಅಳವಡಿಸಿದ್ದಲ್ಲಿ ಅವುಗಳನ್ನು 24 ಗಂಟೆಯೊಳಗಾಗಿ ಕೂಡಲೇ ತೆರವು ಮಾಡಬೇಕು. ಪ್ಲೆಕ್ಸ್ ಅಳವಡಿಸಲು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು, ಅನುಮತಿ ನೀಡಿದ ಅವಧಿ ಮತ್ತು ಸ್ಥಳದಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಎಲ್ಲಾ ಸರ್ಕಾರಿ ಇಲಾಖೆಗಳ ವೆಬ್‍ಸೈಟ್, ಕಾರ್ಯಕ್ರಮಗಳ ಪ್ರದರ್ಶನದಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಬಳಸಿದ್ದಲ್ಲಿ ತೆರವು ಮಾಡಬೇಕು. ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವಂತಿಲ್ಲ, ಈಗಾಗಲೇ ಆರಂಭಿಸಿದ ಕಾಮಗಾರಿಗಳನ್ನು ಮುಂದುವರೆಸಬಹುದಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿಗೆ ತಂಡ ರಚನೆ; ಮಾದರಿ ನೀತಿ ಸಂಹಿತೆ ಜಾರಿಗೆ ತಂಡಗಳನ್ನು ರಚಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಾಯಕ ಚುನಾವಾಣಾಧಿಕಾರಿಗಳ ನೇಮಕ ಮಾಡಲಾಗಿದೆ. ಮತ್ತು ಜಿಲ್ಲೆಯ ಗಡಿಭಾಗದಲ್ಲಿ 20 ಚೆಕ್‍ಪೋಸ್ಟ್, ಜಿಲ್ಲೆಯೊಳಗೆ 15 ಚೆಕ್‍ಪೋಸ್ಟ್‍ಗಳನ್ನು ಸ್ಥಾಪನೆ ಮಾಡಲಾಗಿದೆ. ಮತ್ತು ಪೊಲೀಸ್ ಅಧಿಕಾರಿಗಳನ್ನೊಳಗೊಂಡು 25 ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದೆ. ವೀಡಿಯೋ ಸರ್ವಲೆನ್ಸ್ ಟೀಮ್, ಸಿಸಿ ಟಿವಿ ಅಳವಡಿಕೆ ಮಾಡಲಿದ್ದು ಈ ತಂಡಗಳು ದಿನದ 24 ಗಂಟೆಯು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿವೆ.
ರೂ.50 ಸಾವಿರ ನಗದು ಸಾಗಣೆ; ಸಾರ್ವಜನಿಕರು ಯಾವುದೇ ದಾಖಲೆಗಳಿಲ್ಲದೇ ರೂ.50 ಸಾವಿರವರೆಗೆ ಪ್ರಯಾಣದ ವೇಳೆ ಕೊಂಡೊಯ್ಯಬಹುದಾಗಿದೆ. ಇನ್ನು ಹೆಚ್ಚಿನ ನಗದು ತೆಗೆದುಕೊಂಡು ಹೋಗಲು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂದರು.
190 ಸೆಕ್ಟರ್ ಅಧಿಕಾರಿಗಳ ನೇಮಕ; ಹರಪನಹಳ್ಳಿ ಸೇರಿ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವುದು, ಇವಿಎಂ ಗಳ ಬಳಕೆ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಿಗೆ ಬೆದರಿಕೆ ಉಂಟು ಮಾಡುವವರ ಮೇಲೆ ನಿಗಾವಹಿಸಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯಲು ಪ್ರತಿ ಹಂತದ ವರದಿಯನ್ನು ನೀಡುವರು.
ಕಂಟ್ರೋಲ್ ರೂಂ ಸ್ಥಾಪನೆ; ಮತದಾರರಿಗೆ ಆಮಿಷವೊಡ್ಡಿ ಅನಧಿಕೃತವಾಗಿ ಮದ್ಯ, ಹಣ ಹಾಗೂ ಇತರೆ ವಸ್ತುಗಳ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವಭೀರುವ ಕೆಲಸ ಮಾಡಿದಲ್ಲಿ ದೂರು ನೀಡಲು ಹಾಗೂ ಸಹಾಯಕ್ಕಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. 1950  ಹಾಗೂ 18004250380 ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಬಹುದಾಗಿದೆ. ಮತ್ತು ಸಿವಿಜಿಲ್ ಆಫ್ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಅದರ ಛಾಯಾಚಿತ್ರ, ವೀಡಿಯೋ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ.
ಎಂ.ಸಿ.ಎಂ.ಸಿ; ಮಾಧ್ಯಮಗಳಲ್ಲಿ ಬರುವ ಕಾಸಿಗಾಗಿ ಸುದ್ದಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ತೇಜೋವಧೆ ಮಾಡುವಂತಹ ಸುದ್ದಿಗಳನ್ನು ಪೋಸ್ಟ್ ಮಾಡುವುದರ ಮೇಲೆ ನಿಗಾವಹಿಸಲು ಮೀಡಿಯಾ ಮಾನಿಟರಿಂಗ್ ತಂಡ, ಸಾಮಾಜಿಕ ಜಾಲತಾಣಾ ವೀಕ್ಷಣಾ ತಂಡವನ್ನು ನೇಮಕ ಮಾಡಲಾಗಿದೆ. ಯಾವುದೇ ರಾಜಕೀಯ ಜಾಹಿರಾತುಗಳನ್ನು ಮುದ್ರಣ ಮಾಧ್ಯಮ ಹೊರತುಪಡಿಸಿ ಇತರೆ ಮಾಧ್ಯಮಗಳಲ್ಲಿ ಜಾಹಿರಾತು ನೀಡಲು ಎಂ.ಸಿ.ಎಂ.ಸಿ ಅನುಮತಿ ಕಡ್ಡಾಯವಾಗಿರುತ್ತದೆ.
ವಿದ್ಯುನ್ಮಾನ ಮತಯಂತ್ರ ಬಳಕೆ; ಪ್ರಸಕ್ತ ಲೋಕಸಭಾ ಚುನಾವಣೆಗೆ ಎಂ.3 ಮೇಕ್ 2023 ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು ಬಿಇಎಲ್ ನಿಂದ ತಯಾರಿಸಲಾದ ಬ್ಯಾಲೆಟ್ ಯುನಿಟ್ 2526, ಕಂಟ್ರೋಲ್ ಯುನಿಟ್ 2339, ವಿವಿಪ್ಯಾಟ್ 2534 ಯಂತ್ರಗಳ ಬಳಕೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ಈ ವರ್ಷವೂ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ಮತದಾರರು ಮತದಾನ ಮಾಡಲು ಪ್ರೇರೇಪಣೆ ನೀಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಸಖಿ, ವಿಶೇಷಚೇತನರು, ಯುವ ಮತದಾರರು, ಸಂಪ್ರದಾಯ, ಧ್ಯೇಯ ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ.
85 ವರ್ಷ ಮೇಲ್ಟಟ್ಟ 11258, ವಿಶೇಷಚೇತನ 20351 ಮತದಾರರು ಹಾಗೂ 180 ಜನರು ನೂರು ವರ್ಷಕ್ಕಿಂತಲೂ ಹೆಚ್ಚಿನ ಮತದಾರರಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಉಮಾಪ್ರಶಾಂತ್ ಮಾತನಾಡಿ ಮುಕ್ತ, ನ್ಯಾಯಸಮ್ಮತ, ಶಾಂತಯುತ ಚುನಾವಣೆ ನಡೆಸಲು ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೌಢಿ ಶೀಟರ್‍ಗಳ ಬಾಂಡಿಂಗ್ ಓವರ್, ಸಮಾಜದಲ್ಲಿ ಶಾಂತಿ ಕದಡುವವರ ಪಟ್ಟಿ ಮಾಡಿ ಅವರ ಮೇಲೆ ನಿಗಾವಹಿಸಲಾಗುತ್ತಿದೆ. ಮೊಬೈಲ್ ತಂಡ, ಚೆಕ್‍ಪೋಸ್ಟ್‍ಗಳ ಮೂಲಕ ತೀವ್ರಕಟ್ಟೆಚ್ಚರ ವಹಿಸುವ ಮೂಲಕ ನ್ಯಾಯಸಮ್ಮತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!