ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಿ : ಗಾಯತ್ರಿ ಸಿದ್ದೇಶ್ವರ್.

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.‌

ಜಗಳೂರು ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು ಘಟಕ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಮೋದಿ ಅವರ ನಾಯಕತ್ವದಲ್ಲಿ ದೇಶ ಮುನ್ನಡೆಯಬೇಕು ಅನ್ನೋದು ಕೋಟ್ಯಂತರ ಭಾರತೀಯರ ಅಭಿಲಾಷೆ. ಈಗಾಗಲೇ ದೇಶದಾದ್ಯಂತ ಮೋದಿ ಅಲೆ ಜೋರಾಗಿದೆ ಎಂದರು‌.

ರಾಜಕಾರಣಕ್ಕೆ ನಮ್ಮ ಕುಟುಂಬ‌ ಹೊಸದೇನಲ್ಲ. ನಮ್ಮ ಮಾವನವರಾದ ಮಲ್ಲಿಕಾರ್ಜುನಪ್ಪ, ನನ್ನ ಪತಿ ಸಿದ್ದೇಶ್ವರ್ ಅವರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಚುನಾವಣೆ ವೇಳೆ ನಾನೂ ಕ್ಷೇತ್ರದಲ್ಲಿ ಓಡಾಡಿದ್ದರಿಂದ ಕ್ಷೇತ್ರದ ಮತ್ತು ಜನರ ಪರಿಚಯ ಚನ್ನಾಗಿದೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿಯಲ್ಲಿ ದಾವಣಗೆರೆ ಆಯ್ಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಮನೆಯಲ್ಲೇ ಕೂತು ಮತ ತೆಗೆದುಕೊಳ್ಳುತ್ತಾರೆ. ಗೆದ್ದ ಬಳಿಕ ಜನರ ಕೈಗೂ ಸಿಗುವುದಿಲ್ಲ,ಅಭಿವೃದ್ಧಿ ಕೆಲಸಗಳೂ ಆಗುವುದಿಲ್ಲ. ಹೀಗಾಗಿ ಜನ ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ ಎಂದರು.  ‌
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 3500 ಕೋಟಿ ಅನುದಾನ ನೀಡಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಮೋದಿ ಅವರ  ಆಡಳಿತದಲ್ಲಿ 2047 ರ ಒಳಗೆ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನ ಪಡೆದುಕೊಳ್ಳಲಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು ಪಕ್ಷಕ್ಕೆ ಶಕ್ತಿ ಬಂದಿದೆ. ಈಗ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮತ್ತು ರಾಜೇಶ್ ಇಬ್ಬರೂ ಒಂದಾಗಿ ಪಕ್ಷ ಸಂಘಟಿಸಿ ಬಿಜೆಪಿ ಭದ್ರ ಕೋಟೆ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಸಂಸದ  ಸಿದ್ದೇಶಣ್ಣ ಜಗಳೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಈ ಬಾರಿ ಹೈಕಮಾಂಡ್  ಅವರ ಬದಲಿಗೆ ಪತ್ನಿ ಗಾಯಿತ್ರಿ ಅವರಿಗೆ ಟಿಕೆಟ್ ನೀಡಿದೆ. ಯಾರೆ ಆಗಲಿ ಅವರನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಕಾಂಗ್ರೆಸ್ ಬಿಟ್ಟು  ಮಾತೃಪಕ್ಷಕ್ಕೆ ಮರಳಿದ್ದೇನೆ. ನನಗೂ ಮತ್ತು  ರಾಮಚಂದ್ರ ಇಬ್ಬರಿಗೂ ಸಾಕಷ್ಟು ಸವಾಲುಗಳಿವೆ. ಕಳೆದ ಚುನಾವಣೆಯಲ್ಲಿ ಇಬ್ಬರಿಂದ ಸುಮಾರು ೧ ಲಕ್ಷ ಮತ ಪಡೆದಿದ್ದೇವೆ. ಈಗ ಲೋಕ ಸಭಾ ಚುನಾವಣೆಯಲ್ಲಿ ಎಲ್ಲ ಮತಗಳನ್ನು ಗಾಯಿತ್ರಿ ಅವರಿಗೆ ಹಾಕಿಸಿ ಗೆಲ್ಲಿಸೋಣ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ.ಮಹೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ, ಸಿದ್ದೇಶ್ವರ್ ಪುತ್ರ ಅನಿತ್, ಇಂದಿರಾ ರಾಮಚಂದ್ರ, ಎಚ್.ನಾಗರಾಜ್, ಎಸ್.ಕೆ.ಮಂಜುನಾಥ್ ಮತ್ತಿತರು ಇದ್ದರು..

Leave a Reply

Your email address will not be published. Required fields are marked *

error: Content is protected !!